ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ಘೋಷಣಾ ಸಮಾವೇಶ
ಪುತ್ತೂರು: ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣ ನೀಡುವ ದೀರ್ಘ ದೃಷ್ಠಿಯೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆಯನ್ನು ಸ್ಥಾಪಿಸಲಾಗಿದ್ದು, ಮುಸ್ಲಿಂ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಸಂಘಟನೆ ಶ್ರಮಿಸಲಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಬೂಸುಫ್‍ಯಾನ್ ಮದನಿ ಹೇಳಿದರು.
ಅವರು ಶನಿವಾರ ಪುತ್ತೂರಿನ ಬೈಪಾಸ್‍ಲ್ಲಿರುವ ಖಾಸಗಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಘೋಷಣಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಂಘಟನೆಗಳು ಸಮಸ್ಯೆಗಳನ್ನು ಸೃಷ್ಠಿಸುವ ಬದಲು ಅದನ್ನು ಪರಿಹರಿಸುವ ಕಾಯಕವನ್ನು ಮಾಡಬೇಕು. ಸಂಘಟನೆಗಳೇ ಸಮಸ್ಯೆಯಾಗಿ ಕಾಡುವಂತಾಗಬಾದರು. ಇತ್ತೀಚೆಗೆ ರಾಜ್ಯದಲ್ಲಿ ಉಂಟಾದ ನೆರೆಯಿಂದಾಗಿ ಎಲ್ಲೆಡೆ ಹಾನಿಯಾಗಿದೆ. ಆದರಲ್ಲೂ ಉತ್ತರ ಕರ್ನಾಟಕದ ಬಾಗಲಕೋಟೆ ಪ್ರದೇಶಕ್ಕೆ ನಮ್ಮ ಸಂಘಟನೆಯ ಮೂಲಕ ನೆರವು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಪರಿಸ್ಥಿತಿಗೆ ಯಾವುದೇ ಸಂಘಟನೆಗಳು ಸ್ಪಂದಿಸಿಲ್ಲ. ಅಲ್ಲಿನವರ ಪರಿಸ್ಥಿತಿ ದಯನೀಯವಾಗಿದ್ದು, ಜನರು ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ನಮ್ಮ ಸಂಘಟನೆಯ ಮೂಲಕ ಸಮುದಾಯದ ದಾನಿಗಳ ಸಹಕಾರದಲ್ಲಿ ಅಲ್ಲಿಗೆ 18 ಟ್ರಕ್ ಆಹಾರ ಮತ್ತು ಇತರ ಗ್ರಹಬಳಕೆಯ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಸಮುದಾಯ ಎದುರಿಸುವ ಸಮಸ್ಯೆಗಳಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆ ನಿರಂತರ ಸ್ಪಂಧನೆ ನೀಡಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಮೊಹಲ್ಲಾಗಳಲ್ಲಿ ಪ್ರತಿನಿಧಿಗಳನ್ನು ನೇಮಿಸಿ ಅವರಿಗೆ ಸಮರ್ಪಕ ತರಬೇತುದಾರರಿಂದ ತರಬೇತಿ ನೀಡಿ ಜನಸೇವೆಗಾಗಿ ತಯಾರಿಗೊಳಿಸಲಾಗುವುದು. ಅಲ್ಲದೆ ಸರ್ಕಾರಿ ಸೌಲಭ್ಯಗಳನ್ನು ಅರ್ಹರು ಪಡೆಯುವ ನಿಟ್ಟಿನಲ್ಲಿ ಸಂಘಟನೆ ಕೆಲಸ ಮಾಡಲಿದೆ ಎಂದರು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರ.ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು ಮಾತನಾಡಿ ಮುಸ್ಲಿಂ ಸಮುದಾಯ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದ್ದು ಇತರ ಸಮುದಾಯಕ್ಕೆ ಹೋಲಿಸಿದಾಗ ಮುಸ್ಲಿಂ ಸಮುದಾಯದ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದೆ. ಸರಕಾರಿ ಇಲಾಖೆಗಳಲ್ಲಿ, ಐಎಎಸ್, ಐಪಿಎಸ್, ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯಗಳಲ್ಲೂ ನಮ್ಮ ಸಮುದಾಯದ ಪ್ರಾತಿನಿಧ್ಯತೆ ಭಾರೀ ಕಡಿಮೆ ಇದೆ. ಈ ಕೊರತೆಗಳು ಸಮುದಾಯ ಹಿಂದುಳಿಯಲು ಪ್ರಮುಖ ಕಾರಣವಾಗಿದ್ದು, ಅಂತಹ ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಣೆ ತರುವುದು ಹಾಗೂ ಕಟ್ಟಕಡೆಯ ಜನರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಬಲಿಷ್ಠ ಮತ್ತು ಸಧೃಢ ಸಮುದಾಯವನ್ನು ರೂಪಿಸುವುದೇ ಕರ್ನಾಟಕ ಮುಸ್ಲಿಂ ಜಮಾಅತ್‍ನ ಮುಖ್ಯ ಉದ್ದೇಶವಾಗಿದೆ. ಪಕ್ಷ ರಾಜಕೀಯ ರಹಿತವಾಗಿ ಈ ಸಂಘಟನೆ ಕಾರ್ಯಾಚರಿಸಲಿದೆ. ತಳ ಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಗುರಿಯಾಗಿದೆ ಎಂದರು.
ರಾಜ್ಯದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್‍ಗೆ 10 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ. ರಾಜ್ಯ, ಜಿಲ್ಲೆ, ತಾಲೂಕು ಮತ್ತು ವಲಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಿದ ಅವರು ಜನಶಕ್ತಿಯಿದ್ದರೆ ಮಾತ್ರ ನಮ್ಮ ಮೂಲಭೂತ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ, ನಾವಿನ್ನೂ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಸಮುದಾಯ ಇನ್ನೂ ಅಧೋಗತಿಗೆ ತಲುಪುವುದರಲ್ಲಿ ಅನುಮಾನವಿಲ್ಲ. ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸುವುದರಲ್ಲಿ ನಮ್ಮ ಸಮುದಾಯಕ್ಕೆ ಸಾಧ್ಯವಾಗುವುದಿಲ್ಲ, ಸಮುದಾಯವನ್ನು ಅಭಿವೃದ್ಧಿಪಡಿಸಲು ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯೂ ಇಲ್ಲ, ನಮ್ಮ ಹಕ್ಕುಗಳನ್ನು ಕೇಳಲು ನಮ್ಮಲ್ಲಿ ರಾಜಕೀಯ ಶಕ್ತಿಯೇ ಇಲ್ಲ, ಇವೆಲ್ಲವೂ ನಮ್ಮ ಸಮುದಾಯದ ಅರ್ಧಪತನಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಇರುವ ಮುಸ್ಲಿಂ ಸಮುದಾಯದಿಂದ 7 ಮಂದಿ ಶಾಸಕರು ಮಾತ್ರ ವಿಧಾನ ಸಭೆಯಲ್ಲಿದ್ದಾರೆ, ನಮಗಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯದ 20-30 ಮಂದಿ ವಿಧಾನಸಭೆಯಲ್ಲಿದ್ದಾರೆ, ಬಜೆಟ್‍ನಲ್ಲಿ ನಮ್ಮ ಸಮುದಾಯಕ್ಕೆ ಇಡುತ್ತಿರುವ ಅನುದಾನ ತೀರಾ ಕಡಿಮೆ. ನಮ್ಮ ಸಂಘಟನೆ ರಾಜಕೀಯ ರಹಿತವಾಗಿ ಕಾರ್ಯಾಚರಿಸಲಿದೆಯಾದರೂ ರಾಜಕೀಯ ಪ್ರಭುದ್ದತೆ ಬೆಳೆಸಿಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸುತ್ತದೆ, ಅಲ್ಲದೇ ಸಮುದಾಯದ ಆಶೋತ್ತರಗಳನ್ನು ಈಡೇರಿಸಲು ಒತ್ತಾಯಿಸುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಜಿಲ್ಲಾ ಸಂಯೋಜಕ ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಮಾತನಾಡಿ ಸಮುದಾಯದೊಳಗೆ ಐಕ್ಯತೆ ಸೃಷ್ಟಿಸಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸದೃಡಗೊಳಿಸುವ ಹಾಗೂ ಇತರ ಸಹೋದರ ಧರ್ಮದವರೊಂದಿಗೆ ಸೌಹಾರ್ಧತೆಯನ್ನು ಬೆಳೆಸಿ ಎಲ್ಲರ ಸಹಭಾಗಿತ್ವ, ಬೆಂಬಲ, ಪ್ರೋತ್ಸಾಹದೊಂದಿಗೆ ಬಲಿಷ್ಠ ಸಮಾಜ ನಿರ್ಮಾಣ ಕರ್ನಾಟಕ ಮುಸ್ಲಿಂ ಜಮಾಅತ್‍ನ ಉದ್ದೇಶವಾಗಿದೆ ಎಂದರು.
ಶಾಂತಿ ಸ್ಥಾಪಿಸಲು ಗನ್, ತಲವಾರು, ದೊಣ್ಣೆಗಳಿಂದ ಸಾಧ್ಯವಿಲ್ಲ, ಪೊಲೀಸ್ ಠಾಣೆ, ಕೋರ್ಟ್‍ಗಳಲ್ಲಿಯೂ ಅದು ಸಾಧ್ಯವಿಲ್ಲ, ಆದರೆ ಮಾತುಕತೆಯ ಮೂಲಕ ಎಷ್ಟೇ ದೊಡ್ಡ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದಾಗಿದೆ, ಎಲ್ಲರನ್ನು ಸೇರಿಸಿಕೊಂಡು ಸಮಾಗಮ ಏರ್ಪಡಿಸಿ ಮಾತುಕತೆ ನಡೆಸುವುದರಿಂದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ, ಆ ನಿಟ್ಟಿನಲ್ಲಿ ನಮ್ಮ ಸಂಘಟನೆ ಶ್ರಮಿಸಲಿದೆ ಎಂದು ಹೇಳಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಂ.ಆರ್ ರಶೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಹಾಜಿ ಮುಹಮ್ಮದ್ ಕುಕ್ಕುವಳ್ಳಿ, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಸಂಯೋಜಕ ಅಶ್ರಫ್ ಕಿನಾರ, ಇಂಜಿನಿಯರ್ ಆಲಿಕುಂಞಿ ಕೊರಿಂಗಿಲ, ಪುತ್ತೂರು ಎ.ಪಿ.ಎಂ.ಸಿ ಸದಸ್ಯ ವಿ.ಎಚ್.ಎ ಅಬ್ದುಲ್ ಶಕೂರ್ ಹಾಜಿ ಮಾತನಾಡಿದರು.
ಸಯ್ಯದ್ ಉಮರ್ ತಂಙಳ್ ಬನ್ನೂರು, ಯೂಸುಫ್ ಹಾಜಿ ಕೈಕಾರ, ಅಬ್ದುಲ್ ರಹಿಮಾನ್ ಹಾಜಿ ಬೈತ್ತಡ್ಕ, ಕರ್ನಾಟಕ ಮುಸ್ಲಿಂ ಜಮಾಅತ್ ಕಡಬ ತಾಲೂಕು ಉಸ್ತುವಾರಿ ಸಯ್ಯದ್ ಮೀರಾ ಸಾಹೇಬ್ ಕಡಬ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಸ್ವಾಗತಿಸಿದರು. ಖಾಸಿಂ ಹಾಜಿ ಮಿತ್ತೂರು ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.