×
Ad

ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಸಚಿವರ ಭೇಟಿ

Update: 2019-09-28 21:31 IST

ಉಡುಪಿ, ಸೆ.28: ನಗರದ ಕೆ.ಎಂ.ಮಾರ್ಗದಲ್ಲಿರುವ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಇಂದು ಭೇಟಿ ನೀಡಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರ ಸಲಹೆಯಂತೆ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಆಸ್ಪತ್ರೆ ಉದ್ದಗಲಕ್ಕೂ ತೆರಳಿ ಅತ್ಯಾಧುನಿಕವಾಗಿ ನಿರ್ಮಿಸಲಾದ ಆಸ್ಪತ್ರೆಯ ಸಕಲ ಸೌಲಭ್ಯಗಳನ್ನು ಪರಿಶೀಲಿಸಿದರು. ಹೆರಿಗೆ ವಾರ್ಡ್‌ಗೆ ಭೇಟಿ ನೀಡಿ ಅಲ್ಲಿನ ಕೆಲವು ತಾಯಿಯರೊಂದಿಗೆ ಸಮಾಲೋಚಿಸಿದರು.

ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾಗಿದ್ದು, ಉಡುಪಿ ಮೂಲದ ಅನಿವಾಸಿ ಭಾರತೀಯರಾದ ಬಿ.ಆರ್.ಶೆಟ್ಟಿ ಅವರ ಮಾಲಕತ್ವದ ಬಿ.ಆರ್.ಎಸ್. ಹೆಲ್ತ್ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರೈವೆಟ್ ಲಿಮಿಟೆಡ್ ನಡೆಸುವ ಈ ಆಸ್ಪತ್ರೆಯ ವ್ಯವಸ್ಥೆಯಲ್ಲಿ ಆಗಬೇಕಾದ ಕೆಲವು ಬದಲಾವಣೆಯ ಕುರಿತು ಶಾಸಕ ರಘುಪತಿ ಭಟ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಮನವಿ ಅರ್ಪಿಸಿ, ಆಗ್ರಹಿಸಿದರು.

ಸರಕಾರಿ ಯುನಿಟ್ ಬೇಕು: ಇದೊಂದು ಸರಕಾರಿ ಆಸ್ಪತ್ರೆಯಾದರೂ, ಇಲ್ಲಿರುವುದು ಸಂಪೂರ್ಣ ಖಾಸಗಿ ವ್ಯವಸ್ಥೆಯಾಗಿರುವುದರಿಂದ ಜನರಿಗೆ ಇನ್ನೂ ಆಸ್ಪತ್ರೆಯ ಮೇಲೆ ವಿಶ್ವಾಸ ಮೂಡುತ್ತಿಲ್ಲ. ಇದರಿಂದ ಜನರೂ ಸಾಕಷ್ಟು ತೊಂದರೆ ಎದುರಿಸುತಿದ್ದಾರೆ. ಇಲ್ಲಿನ ವೈದ್ಯರು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೇ ರೋಗಿಗಳನ್ನು ಮಣಿಪಾಲ ಅಥವಾ ಬೇರೆ ಖಾಸಗಿ ಆಸ್ಪತ್ರೆಗೆ ಕಳುಹಿಸುತಿದ್ದಾರೆ. ಇಲ್ಲಿರುವವರು ಡಿಎಚ್‌ಓ, ಸರ್ಜನ್ ಸೇರಿದಂತೆ ಜನಪ್ರತಿನಿಧಿಗಳ ಮಾತಿಗೂ ಬೆಲೆ ನೀಡುತ್ತಿಲ್ಲ ಎಂದು ಭಟ್ ಸೇರಿದಂತೆ ಜನಪ್ರತಿನಿಧಿಗಳು ದೂರಿದರು.

ಇದಕ್ಕೆ ಪರಿಹಾರವೆಂದರೆ, ಮೊದಲು ಸರಕಾರಿ ವೈದ್ಯರು ಹಾಗೂ ವ್ಯವಸ್ಥೆಯಲ್ಲಿ ನಡೆಯುತಿದ್ದಂತೆ ಒಂದು ಯುನಿಟ್‌ನ್ನು ಸರಕಾರ ನಡೆಸಲಿ. ಇನ್ನುಳಿದ ಎರಡು ಯುನಿಟ್‌ಗಳನ್ನು ಆಸ್ಪತ್ರೆಯವರು ನಡೆಸಲಿ. ಇದರಿಂದ ಜನರಿಗೂ ಸರಕಾರಿ ವ್ಯವಸ್ಥೆ ಇಲ್ಲಿರುವ ಬಗ್ಗೆ ನಂಬುಗೆ ಮೂಡುತ್ತದೆ. ತೀರಾ ಬಡವರಿಗೆ ಆರೋಗ್ಯ ಸಮಸ್ಯೆಗಳಾದಾಗ ಚಿಕಿತ್ಸೆ ಕೊಡಿಸಲು ನಮಗೆ ಸಾಧ್ಯವಾಗುತ್ತದೆ ಎಂದ ಭಟ್ ಮಾತಿಗೆ ಜಿಪಂ ಅಧ್ಯಕ್ಷ ದಿನಕರಬಾಬು ಮತ್ತು ಸದಸ್ಯೆ ಗೀತಾಂಜಲಿ ಸುವರ್ಣ ಧ್ವನಿಗೂಡಿಸಿದರು.

ಇದನ್ನು ತಕ್ಷಣ ನಿರಾಕರಿಸಿದ ಬಿ.ಆರ್.ಶೆಟ್ಟಿ ಆಸ್ಪತ್ರೆ ಸಮೂಹದ ಜನರಲ್ ಮ್ಯಾನೇಜರ್ ಕುಶಲ ಶೆಟ್ಟಿ ಅವರು, ಹಿಂದೆ ಸಂಪೂರ್ಣ ಸೌಲಭ್ಯ ಸಿದ್ಧಗೊಳ್ಳದ ವೇಳೆ ಕೆಲವು ಕೇಸುಗಳನ್ನು ಹೊರಗೆ ಕಳುಹಿಸಿದ್ದೇವೆ. ಈಗ ಐಸಿಯು ಸೇರಿದಂತೆ ಹೆಚ್ಚಿನ ಸೌಲಭ್ಯಗಳು ಇರುವುದರಿಂದ ಹೆಚ್ಚಿನವರಿಗೆ ಇಲ್ಲೇ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 13 ತಿಂಗಳಿನಿಂದ ಇಲ್ಲಿ 3800ಕ್ಕೂ ಅಧಿಕ ಹೆರಿಗೆಗಳು ಈ ಆಸ್ಪತ್ರೆಯಲ್ಲಿ ಆಗಿವೆ ಎಂದರು.

ಈಗ ಲೆವಲ್ ಮೂರರವರೆಗೆ ಇಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಲೆವೆಲ್ 4ರ ರೋಗಿಗಳನ್ನು ಮಾತ್ರ ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ ಎಂದ ಕುಶಲಶೆಟ್ಟಿ, ಒಂದು ಯುನಿಟ್ ಸರಕಾರಿ ವ್ಯವಸ್ಥೆ, ಎರಡು ಯುನಿಟ್ ನಮ್ಮದು ಎಂದರೆ ಗೊಂದಲ ಶುರುವಾಗುತ್ತದೆ. ಆಗ ಎಲ್ಲವೂ ಅವ್ಯವಸ್ಥೆ ಯಾಗುತ್ತದೆ ಎಂದರು.

ಎಲ್ಲಾ ವೈದ್ಯರನ್ನು ಸರಕಾರವೇ ನೇಮಿಸಲಿ. ವ್ಯವಸ್ಥೆ ನಾವು ನೀಡುತ್ತೇವೆ. ಸಂಬಳ ನೀಡಿದರೂ ತಜ್ಞರು ವೈದ್ಯರು ಸಿಗುತ್ತಿಲ್ಲ ಎಂದ ಅವರ ಸಲಹೆಗೆ ಸಚಿವರು ಹಾಗೂ ಶಾಸಕರು ಸಮ್ಮತಿಸಲಿಲ್ಲ.

ಮೊದಲು ಬಿಪಿಎಲ್ ಕಾರ್ಡ್‌ದಾರರು ಮಾತ್ರ ಬರುತಿದ್ದರು, ಈಗ ಎಪಿಎಲ್ ಹಾಗೂ ಹೊರಜಿಲ್ಲೆಗಳಿಂದ ಸಹ ಶ್ರೀಮಂತರು ಬಂದು ಹೆರಿಗೆಗಾಗಿ ಇಲ್ಲಿಗೆ ಬರುತ್ತಾರೆ. ಹೀಗಾಗಿ ನಮಗೆ ಭಾರೀ ಒತ್ತಡವಿದೆ ಎಂದು ಆಸ್ಪತ್ರೆಯ ಗೈನಕಾಲಜಿಸ್ಟ್ ಡಾ.ಶಿಖಾ ನುಡಿದರು.

ಈ ಕುರಿತು ಜನಪ್ರತಿನಿಧಿಗಳು, ಆಸ್ಪತ್ರೆಯ ಆಡಳಿತ ಮಂಡಳಿ, ಡಿಎಚ್‌ಓ, ಜಿಲ್ಲಾ ಸರ್ಜನ್, ಇಲಾಖೆಯ ಹಿರಿಯ ಅಧಿಕಾರಿಗಳು ಎಲ್ಲರೂ ಕುಳಿತು ಚರ್ಚಿಸಿ, ಬೆಂಗಳೂರಿನಲ್ಲಿ ಇನ್ನೊಂದು ಸುತ್ತಿನ ಮಾತುಕತೆಯ ಬಳಿಕ 15 ದಿನದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳೊಣ ಎಂದು ಸಚಿವ ಶ್ರೀರಾಮುಲು ಕೊನೆಯಲ್ಲಿ ತಿಳಿಸಿದರು.

ಈ ಕುರಿತು ಜನಪ್ರತಿನಿಧಿಗಳು, ಆಸ್ಪತ್ರೆಯ ಆಡಳಿತ ಮಂಡಳಿ, ಡಿಎಚ್‌ಓ, ಜಿಲ್ಲಾ ಸರ್ಜನ್, ಇಲಾಖೆಯ ಹಿರಿಯ ಅಧಿಕಾರಿಗಳು ಎಲ್ಲರೂ ಕುಳಿತು ಚರ್ಚಿಸಿ, ಬೆಂಗಳೂರಿನಲ್ಲಿ ಇನ್ನೊಂದು ಸುತ್ತಿನ ಮಾತುಕತೆಯ ಬಳಿಕ 15 ದಿನದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳೊಣ ಎಂದು ಸಚಿವ ಶ್ರೀರಾಮುಲು ಕೊನೆಯಲ್ಲಿ ತಿಳಿಸಿದರು.

ಆಯುಷ್ಮಾನ್ ಭಾರತ್: ಶಿಫಾರಸ್ಸು ಪತ್ರ ರದ್ದು

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವಿವಿಧ ರೋಗಗಳಿಗೆ ಸರಕಾರಿ ಆಸ್ಪತ್ರೆಯ ರೆಫರಲ್ ಪತ್ರ ಪಡೆಯಬೇಕಿದ್ದು, ಇದನ್ನು 1 ಮತ್ತು 2ನೇ ಹಂತದ ಕಾಯಿಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು. 3ನೇ ಹಂತದ ರೋಗಗಳ ಚಿಕಿತ್ಸೆಗಾಗಿ ಫಲಾನುಭವಿಗಳು ಪಡೆಯಬೇಕಿದ್ದ ರೆಫರಲ್ ಪತ್ರವನ್ನು ರದ್ದು ಪಡಿಸಿ ಅವರು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವಂತೆ ಮಾಡಲಾಗುವುದು. ಈ ಕುರಿತು ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ನುಡಿದರು.

ಪ್ರಸ್ತುತ ಕ್ಯಾನ್ಸರ್, ನ್ಯೂರಾಲಜಿ, ಸೈಕಾಲಜಿಗೆ ಸಂಬಂಧಿಸಿದ 3ನೇ ಹಂತದ ರೋಗಗಳಿಗೆ ಆಯುಷ್ಮಾನ್ ಭಾರತ ಯೋಜನೆಯಡಿ ಚಿಕಿತ್ಸೆ ಪಡೆಯಲು ಸರಕಾರಿ ಆಸ್ಪತ್ರೆಯಿಂದ ರೆಫರಲ್ ಪಡೆಯಬೇಕಾಗಿದೆ. 4ನೇ ಹಂತದ ರೋಗಗಳಿಗೆ ಮಾತ್ರ ಅನಾರೋಗ್ಯ ಪೀಡಿತರು ನೇರವಾಗಿ ಖಾಸಗಿ ಆಸ್ಪತ್ರೆ ಗಳಿಗೆ ತೆರಳಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಸೌಲಭ್ಯವನ್ನು 3ನೇ ಹಂತದಲ್ಲಿ ಗುರುತಿಸಲಾಗಿರುವ ರೋಗಗಳಿಗೆ ಹ ವಿಸ್ತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಡಿಹೆಚ್‌ಓ ಡಾ.ಅಶೋಕ್, ಆಸ್ಪತ್ರೆಯ ಮೆನೇಜರ್ ಪ್ರಶಾಂತ್ ಮಲ್ಯ, ಡಾ.ವಿಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News