×
Ad

ಪಿಎಂಸಿ ನಂತರ ಈಗ ಇನ್ನೊಂದು ಬ್ಯಾಂಕ್ ಮೇಲೆ ನಿರ್ಬಂಧ ಹೇರಿದ ಆರ್‌ಬಿಐ

Update: 2019-09-28 21:44 IST

ಹೊಸದಿಲ್ಲಿ,ಸೆ.28: ನಿರ್ದೇಶಕರ ವಿರುದ್ಧ ವಂಚನೆ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಖಾಸಗಿ ವಲಯದ ಲಕ್ಷ್ಮಿ ವಿಲಾಸ ಬ್ಯಾಂಕ್ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾಮ್ಟ್ ಕರೆಕ್ಟಿವ್ ಆ್ಯಷನ್ (ಪಿಸಿಎ) ಜಾರಿ ಮಾಡಿದೆ ಎಂದು ಬ್ಯಾಂಕ್ ಶನಿವಾರ ಅಧಿಕೃತ ಹೇಳಿಕೆ ನೀಡಿದೆ. ಬ್ಯಾಂಕ್‌ನ ಮಂಡಳಿಯ ನಿರ್ದೇಶಕರ ವಿರುದ್ಧ ಕೇಳಿಬಂದಿರುವ ವಂಚನೆ ಮತ್ತು ವಿಶ್ವಾಸದ್ರೋಹದ ಆರೋಪಗಳ ತನಿಖೆಯನ್ನು ದಿಲ್ಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ ನಡೆಸುತ್ತಿದೆ.

ಮೆ. ಆರ್‌ಎಚ್‌ಸಿ ಹೋಲ್ಡಿಂಗ್ಸ್ ಪ್ರೈ.ಲಿ. ಮತ್ತು ಮೆ. ರಂಚೆಮ್ ಪ್ರೈ.ಲಿ.ನ ಸಾಲಗಳನ್ನು ತನ್ನ 790 ಕೋಟಿ ರೂ. ಠೇವಣಿಯೊಂದಿಗೆ ಹೊಂದಿಕೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ಮೆ. ರೆಲಿಗೆರ್ ಫಿನ್ವೆಸ್ಟ್ ಲಿ. (ಆರ್‌ಎಫ್‌ಎಲ್) ನೀಡಿದ ದೂರಿನ ಆಧಾರದಲ್ಲಿ ಬ್ಯಾಂಕ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬ್ಯಾಂಕ್‌ನಲ್ಲಿ ಏರುತ್ತಿರುವ ಅನುತ್ಪಾದಕ ಸಾಲ, ಅಪಾಯಹೊಂದಿರುವ ಸಾಲಗಳ ನಿಬಾಯಿಸಲು ಬಂಡವಾಳ ಕೊರತೆ ಮತ್ತು ಎರಡು ವಿತ್ತೀಯ ವರ್ಷಗಳಲ್ಲಿ ಲಾಭ ಗಳಿಸಲು ವಿಫಲವಾಗಿರುವುದು ಈ ಎಲ್ಲ ಕಾರಣಗಳಿಂದ ಆರ್‌ಬಿಐ ಲಕ್ಷ್ಮಿ ವಿಲಾಸ ಬ್ಯಾಂಕ್ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ. ಆ ಪ್ರಕಾರ ಕೇಂದ್ರ ಬ್ಯಾಂಕ್‌ಗೆ ಪ್ರತಿ ತಿಂಗಳೂ ವರದಿಯನ್ನು ಸಲ್ಲಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಆರ್‌ಬಿಐ ಹೇರಿರುವ ನಿರ್ಬಂಧ ಬ್ಯಾಂಕ್‌ನ ನಿರ್ವಹಣೆಯನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿದೆಯೇ ಹೊರತು ಇದರಿಂದ ಬ್ಯಾಂಕ್‌ನ ದೈನಂದಿನ ವ್ಯವಹಾರದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News