×
Ad

'ಸಹಕಾರಿ ಸಂಘಗಳ ಸಮಸ್ಯೆಗಳ ನಿವಾರಣೆಗಾಗಿ ಕೇಂದ್ರ, ರಾಜ್ಯಕ್ಕೆ ನಿಯೋಗ'

Update: 2019-09-28 21:54 IST

ಉಡುಪಿ, ಸೆ.28: ಸಹಕಾರ ಸಂಘಗಳ ಸಮರ್ಪಕ, ಆರೋಗ್ಯಕರ ಮತ್ತು ನಿಯಮಬದ್ದ ಬೆಳವಣಿಗೆ ಹಾಗೂ ಅಭಿವೃದ್ದಿಯ ಹಿತದೃಷ್ಟಿಯಿಂದ ಆದಾಯ ತೆರಿಗೆ/ಸೇವಾ ತೆರಿಗೆ ಸಮಸ್ಯೆಗಳ ನಿವಾರಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಲು ಜಿಲ್ಲಾ ಸಹಕಾರ ಯೂನಿಯನ್ ನಿಯೋಗ ದೆಹಲಿ ಹಾಗೂ ಬೆಂಗಳೂರಿಗೆ ತೆರಳುವ ಕುರಿತು ಶನಿವಾರ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದ ಸಹಕಾರಿ ಸಂವಾದ ಕಾರ್ಯಕ್ರಮದಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಹಕಾರ ಸಂಘಗಳನ್ನು ಕಾಡುತ್ತಿರುವ ಕೇಂದ್ರದ ಆದಾಯ ತೆರಿಗೆ, ಸೇವಾ ತೆರಿಗೆ ಹಾಗೂ ರಾಜ್ಯದ ಸಹಕಾರ ಸಂಘಗಳ ಕಾಯ್ದೆ-ನಿಯಮಗಳಲ್ಲಿನ ತೊಡಕುಗಳ ಕುರಿತು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಜಂಟಿ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಯೋಗವು ಸಂಬಂಧಪಟ್ಟ ಕೇಂದ್ರ/ರಾಜ್ಯದ ಮಂತ್ರಿ ಗಳಿಗೆ ಹಾಗೂ ಉನ್ನತ ಇಲಾಖಾಧಿಕಾರಿಗಳಿಗೆ ಮನವಿಯನ್ನು ಅರ್ಪಿಸಿ ಅಗತ್ಯ ಕ್ರಮಕೈಗೊಳ್ಳಲು ಒತ್ತಾಯಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಸಂಘಗಳ ಕುರಿತು ನಿರಾಶವಾದಿಗಳಾಗದೆ ಆಶಾವಾದಿಗಳಾಗಿ ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ನಮ್ಮ ಬದುಕಿಗೆ ಇನ್ನಷ್ಟು ಬಲ ಬರಬೇಕಾದರೆ ಸಹಕಾರಿ ಹೋರಾಟವನ್ನು ಮುಂದು ವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಆರ್‌ಬಿಐ, ಸಹಕಾರಿ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್‌ಗಳನ್ನು ಒಂದೇ ಕಾನೂನಿನಡಿಯಲ್ಲಿ ನೋಡುತ್ತಿದೆ. ಸಹಕಾರಿ ಸಂಘಗಳು ಜನರು ಹಾಗೂ ಸದಸ್ಯರಿಂದ ಸಂಗ್ರಹಿಸುವ ಠೇವಣಿಯಿಂದ ವ್ಯವಹಾರ ನಡೆಸುತ್ತಿದೆ. ಅದರಿಂದಲೇ ಸಾಲ ನೀಡುತ್ತಿದ್ದು, ಸರಕಾರದ ಸಾಲಮನ್ನಾವನ್ನು ಮಾಡುತ್ತಿದೆ. ಅದರಿಂದ ಬರುವ ಬಡ್ಡಿಯನ್ನು ಉಪಯೋಗಿಸಿಕೊಂಡು ಲಾಭದಲ್ಲಿ ಮುಂದು ವರಿಯುತ್ತಿದೆ. ಆದರೆ ಸರಕಾರದಿಂದ ಕೋಟಿಗಟ್ಟಲೆ ಹಣ ಪಡೆಯುವ ವಾಣಿಜ್ಯ ಬ್ಯಾಂಕ್‌ಗಳು ನಷ್ಟವನ್ನು ತೋರಿಸುತ್ತಿವೆ ಎಂದು ಅವರು ದೂರಿದರು.

ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಲೆಕ್ಕಪರಿಶೋಧಕರಾದ ಪ್ರಸನ್ನ ಶೆಣೈ, ಸುಜಯ ಡಿ.ಆಳ್ವ ಮಾತನಾಡಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು.

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ಸಹಕಾರ ಭಾರತಿಯ ಪ್ರಧಾನ ಕಾರ್ಯದರ್ಶಿ ಮಧುಸೂದನ ನಾಯಕ್, ಡಿಸಿಸಿ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ, ರಾಜು ಪೂಜಾರಿ, ಅಶೋಕ್ ಶೆಟ್ಟಿ, ಹಿರಿಯ ಸಹಕಾರಿ ಕೃಷ್ಣರಾಜ ಸರಳಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News