ಆರೋಗ್ಯ ಕಾರ್ಡ್ ಯೋಜನೆ ರಾಜ್ಯಕ್ಕೆ ವಿಸ್ತರಿಸಲು ಚಿಂತನೆ: ಆರೋಗ್ಯ ಸಚಿವ ಶ್ರೀರಾಮುಲು
ಉಡುಪಿ, ಸೆ.28: ಆರೋಗ್ಯಕ್ಕೆ ಸಂಬಂಧಿಸಿದಂತೆ ಬಡವರಿಗೆ ಸುಲಭದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವಂತೆ ಆರೋಗ್ಯ ಸುರಕ್ಷಾ ಕಾರ್ಡ್ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರಾರಂಭಿಸಲು ಕ್ರಮ ಕೈಗೊ ಳ್ಳುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಮಣಿಪಾಲದ ಮಾಹೆಯ ಸಹಕಾರದೊಂದಿಗೆ ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಇಂದು ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಆಯೋಜಿಸಿದ್ದ 30,000 ಕುಟುಂಬಗಳ 1.35 ಲಕ್ಷ ಫಲಾನುಭವಿಗಳಿಗೆ ‘ಆರೋಗ್ಯ ಸುರಕ್ಷಾ ಕಾರ್ಡ್’ಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜೀವನದಲ್ಲಿ ಮನುಷ್ಯನಿಗೆ ಆರೋಗ್ಯ ಮುಖ್ಯ.ಅದನ್ನು ಖರೀದಿಸಲು ಸಾಧ್ಯವಿಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯ ಸುರಕ್ಷಾ ಕಾರ್ಡ್‌ನಂಥ ಯೋಜನೆಗಳು ಮುಖ್ಯವಾಗುತ್ತವೆ. ಹೀಗಾಗಿ ಈ ಯೋಜನೆಯನ್ನು ರಾಜ್ಯಕ್ಕೆ ವಿಸ್ತರಿಸಬೇಕಾಗಿದೆ ಎಂದವರು ನುಡಿದರು.
ಜಿಲ್ಲಾಸ್ಪತ್ರೆಗಳ ಅವ್ಯವಸ್ಥೆಯ ಕುರಿತಂತೆ ಪ್ರತಿ ಜಿಲ್ಲೆಗಳಿಂದ ಬರುತ್ತಿರುವ ದೂರುಗಳನ್ನು ಗಮನಿಸಿ, ಈ ಬಗ್ಗೆ ಖುದ್ದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಜಿಲ್ಲಾಸ್ಪತ್ರೆಗಳಲ್ಲಿ ವಾಸ್ತವ್ಯವನ್ನು ಪ್ರಾರಂಭಿಸಿದ್ದೇನೆ. ಈಗಾಗಲೇ ಚಾಮರಾಜ ನಗರ, ಮಡಿಕೇರಿಗಳಲ್ಲಿ, ನಿನ್ನೆ ಉಡುಪಿಯಲ್ಲಿ ಇದು ನಡೆದಿದೆ. ಖಾಸಗಿ ಆಸ್ಪತ್ರೆಯ ರೀತಿ ಸರಕಾರಿ ಆಸ್ಪತ್ರೆಯ ಬಗ್ಗೆಯೂ ಜನರಿಗೆ ಪೂರ್ಣ ವಿಶ್ವಾಸ ಮೂಡುವಂತೆ ಸರಕಾರಿ ಆಸ್ಪತ್ರೆಗಳನ್ನು ತಾನು ಮಾರ್ಪಡಿಸುವುದಾಗಿ ಹೇಳಿದರು.
ಉಡುಪಿಯ ಜಿಲ್ಲಾಸ್ಪತ್ರೆಯನ್ನು 250 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆ ಗೇರಿಸಲು ಶೀಘ್ರವೇ ಶಿಲಾನ್ಯಾಸ ನೆರವೇರಿಸುವ ಭರವಸೆ ನೀಡಿದ ಅವರು, ಆಸ್ಪತ್ರೆಗಳಲ್ಲಿ ಕೊರತೆ ಇರುವ ವೈದ್ಯರ ನೇರ ನೇಮಕಾತಿಗೆ ಕ್ರಮ ಕೈಗೊಂಡಿದ್ದೇನೆ ಎಂದರು.
ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ 40ಕ್ಕೂ ಹೆಚ್ಚುಬಾರಿ ರಕ್ತದಾನ ಮಾಡಿದ ಚಂದ್ರೇಶ ಪಿತ್ರೋಡಿ ಇವರನ್ನು ಸಚಿವರು ಸನ್ಮಾನಿಸಿದರು. ಮೊಗವೀರ ಯುವ ಸಂಘಟನೆ ಅಧ್ಯಕ್ಷ ವಿನಯ ಕರ್ಕೇರ ಉಪಸ್ಥಿತರಿದ್ದರು.
ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ.ಶಂಕರ್ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಮೊಗವೀರ ಯುವ ಸಂಘಟನೆಯ ಉಪಾಧ್ಯಕ್ಷ ಶಿವರಾಂ ಕೆಎಂ ಸ್ವಾಗತಿಸಿದರು. ಶಂಕರ್ ಸಾಲ್ಯಾನ್ ವಂದಿಸಿದರೆ, ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು.