×
Ad

ಮನುಕುಲದ ಒಳಿತಿಗಾಗಿ ಇಸ್ರೋದಿಂದ ಖಗೋಳ ವಿಜ್ಞಾನ ತಂತ್ರಜ್ಞಾನದ ಬಳಕೆ: ಡಾ.ಕಸ್ತೂರಿ ರಂಗನ್‌

Update: 2019-09-28 22:16 IST

ಮಂಗಳೂರು : ಮನುಕುಲದ ಒಳಿತಿಗಾಗಿ ಖಗೋಳ ವಿಜ್ಞಾನ ಬಳಕೆ ಮಾಡುವ ನಿಟ್ಟಿನಲ್ಲಿ ಇಸ್ರೋ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಖ್ಯಾತ ಖಗೋಳ ವಿಜ್ಞಾನಿ, ಭಾರತ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಾಜಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್ ತಿಳಿಸಿದ್ದಾರೆ.

ನಗರದ ಟಿಎಂಎ ಪೈ ಸಭಾಂಗಣದಲ್ಲಿಂದು ನಡೆಯುತ್ತಿರುವ ಎಎಸ್‌ಎಸ್‌ಐ ವೈದ್ಯರ ಸಂಘಟನೆಯ ಸಮ್ಮೇಳನದ ಎರಡನೆ ದಿನದ ಗೋಷ್ಠಿಯನ್ನುದ್ದೇಶಿಸಿ ಅವರು ಇಂದು ಮಾತನಾ ಡುತ್ತಿದ್ದರು.

ವಿಕ್ರಂ ಸಾರಾಭಾಯಿಯವರ ದೂರದೃಷ್ಟಿಯ ಫಲವಾಗಿ ಇಸ್ರೋ ಸಂಸ್ಥೆಯ ಮೂಲಕ ಖಗೋಳ ವಿಜ್ಞಾನವನ್ನು ಭಾರತದ ಶಾಂತಿ ಸೌಹಾರ್ದತೆಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಯೋಜನೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. 1957-58ರಲ್ಲಿ ಜಾಗತಿಕವಾಗಿ ಖಗೋಳ ಕ್ಷೇತ್ರವನ್ನು ಮಿಲಿಟರಿ ಶಕ್ತಿಯ ಬಳಕೆಗಾಗಿ ಉಪಯೋಗಿಸುತ್ತಿದ್ದ ಕಾಲಘಟ್ಟದಲ್ಲಿ ಭಾರತ ಭಿನ್ನವಾಗಿ ಯೋಚಿಸಲಾರಂಭಿಸಿತು. 1963ರಲ್ಲಿ ವಿಜ್ಞಾನ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯ ಬಳಕೆಗಾಗಿ ಖಗೋಳ ಕ್ಷೇತ್ರವನ್ನು ಬಳಸುವ ಬಗ್ಗೆ ಚಿಂತನೆ ಭಾರತದಲ್ಲಿ ಆರಂಭ ಗೊಂಡಿತು. ಪರಿಣಾಮವಾಗಿ ಸಂವಹನ ಕ್ಷೇತ್ರದಲ್ಲಿ, ಹವಾಮಾನದ ಸ್ಥಿತಿಗತಿ ಅಧ್ಯಯನ, ಕೃಷಿ, ಮೀನುಗಾರಿಕೆ, ನೀರು, ಬಿರುಗಾಳಿ , ಚಂಡ ಮಾರುತಗಳ ಬಗ್ಗೆ ಮುನ್ಸೂಚನೆ, ವಿಪತ್ತು ನಿರ್ವಹಣೆಯ ಹಿನ್ನೆಲೆಯಲ್ಲಿ ಬಾಹ್ಯಾಕಾಶದಿಂದ ಕಳುಹಿಸಲಾದ ಉಪಗ್ರಹಗಳು ಸಾಕಷ್ಟು ಮಾಹಿತಿಗಳನ್ನು ನೀಡಿವೆ. ಇಸ್ರೋ ಕಳೆದ 5 ದಶಕಗಳಲ್ಲಿ 105 ಉಪಗ್ರಹಗಳನ್ನು ಹಾರಿಸುವಲ್ಲಿ ಯಶಸ್ಸುಗಳಿಸಿದೆ. 297 ವಿದೇಶಿ ಉಪಗ್ರಹಗಳನ್ನು ಹಾರಿಸಲು ನೆರವು ನೀಡಿದೆ. ಇಸೋ ಸಂವಹನ, ಸಂಪರ್ಕ ಸಾಧ್ಯವಿಲ್ಲದ ಪ್ರದೇಶಗಳ ಅನ್ವೇಷಣೆ, ಬಾಹ್ಯಾಕಾಶ ಸಂಚಾರ, ಬಾಹ್ಯಾಕಾಶ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ಅನ್ವೇಷಣೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಬಾಹ್ಯಾಕಾಶದಲ್ಲಿ ಮಾನವನ ದೇಹದ ಮೇಲೆ ಉಂಟಾಗಬಹುದಾದ ಪರಿಣಾಮಗಳು ಅದನ್ನು ತಡೆಯುವ ವಿಧಾನಗಳ ಬಗ್ಗೆ ಇಸ್ರೋ ಸಾಕಷ್ಟು ಅಧ್ಯಯನ ನಡೆಸಿದೆ. ವಿಕ್ರಂ ಸಾರಾಭಾಯಿ, ಸತೀಶ್ ಧವನ್, ಯು.ಆರ್.ರಾವ್ ಮೊದಲಾದ ವಿಜ್ಞಾನಿಗಳ ದೂರದೃಷ್ಟಿಯಿಂದ ಇಸ್ರೋ ದೇಶದ ಖಗೋಳ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದೆ ಎಂದು ಕಸ್ತೂರಿ ರಂಗನ್ ತಿಳಿಸಿದ್ದಾರೆ.

ಇಸ್ರೋ ಚಂದ್ರಯಾನ-2 ಮಹತ್ವದ ಹೆಜ್ಜೆ :-

ಕಳೆದ ನಾಲ್ಕು ವರ್ಷದ ಸತತ ಪ್ರಯತ್ನದ ಫಲವಾಗಿ ಇಸ್ರೋ ಚಂದ್ರಯಾನ -2 ಒಂದು ಸಂಕೀರ್ಣವಾದ ಯೋಜನೆಯಾಗಿತ್ತು. ನಿಗದಿತ ಗುರಿ ತಲುಪಲು ಸುಮಾರು 2 ಕಿ.ಮೀ ದೂರದಲ್ಲಿರುವಾಗ ಸ್ವಲ್ಪ ಅಡಚಣೆಯಾದರೂ ಅದೊಂದು ವೈಫಲ್ಯ ಎನ್ನಲು ಸಾಧ್ಯವಿಲ್ಲ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದೊಂದು ಮಹತ್ವದ ಹೆಜ್ಜೆ. ನಾವು ನಮ್ಮ ಕ್ಷೇತ್ರದಲ್ಲಿ ಆಗುವ ಸೋಲಿನಿಂದಲೂ ಸಾಕಷ್ಟು ಪಾಠ ಕಲಿತ್ತಿದ್ದೇವೆ. ಅದರಿಂದ ಪಾಠ ಕಲಿತು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕಳೆದ 5 ವರ್ಷದಲ್ಲಿ ಭಾರತದ ವಿಜ್ಞಾನಿಗಳು ತವೇ ಉಪಗ್ರಹವನ್ನು ತಯಾರಿಸಿ ಉಡಯನ ಮಾಡುವ ಸಾಮಥ್ಯ ವನ್ನು ಪಡೆದಿದೆ ಎಂದು ಕಸ್ತೂರಿ ರಂಗನ್ ತಿಳಿಸಿದರು.

ಸೂರ್ಯನ ಬಗೆಗೆ ಅಧ್ಯಯನ:- ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಇಸ್ರೋ ಆದಿತ್ಯ -2020 ಯೋಜನೆಯನ್ನು ಹಮ್ಮಿಕೊಂಡಿದೆ.ಈ ಬಾಹ್ಯಾಕಾಶ ಯೋಜನೆಯ ಮೂಲಕ ಸೂರ್ಯನ ಮೇಲ್ಮೆ ಕಿರಣಗಳು ಮತ್ತು ಭೂಮಿಗೆ ಹಾದು ಬರುವ ಕಿರಣಗಳು ಅದರ ಪರಿಣಾಮಗಳಿಗೆ ಸಂಬಂಧಿಸಿದಂತೆ ಕಾರಣಗಳನ್ನು ಕಂಡು ಕೊಳ್ಳುವ ಮಹತ್ವದ ಗುರಿಯನ್ನು ಹೊಂದಿದೆ ಎಂದು ಡಾ.ಕಸ್ತೂರಿ ರಂಗನ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ಎಎಸ್‌ಎಸ್‌ಐ ಸಂಘಟನೆಯ ಅಧ್ಯಕ್ಷ ಡಾ.ಎಚ್.ಎಸ್ ಚಬ್ರ, ಕಾರ್ಯದರ್ಶಿ ಡಾ. ಅಜಯ ಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News