×
Ad

ಐಐಟಿಗಳಲ್ಲಿ ಎಂಟೆಕ್ ಶುಲ್ಕ ಶೇ. 900ರ ವರೆಗೆ ಏರಿಕೆ

Update: 2019-09-28 23:07 IST

ಹೊಸದಿಲ್ಲಿ, ಸೆ. 28: ಎಂಟೆಕ್ ಕೋರ್ಸ್‌ಗಳ ಶುಲ್ಕವನ್ನು ಸರಿಸುಮಾರು ಶೇ. 900ರ ವರೆಗೆ ಏರಿಕೆ ಮಾಡಲು ಹಾಗೂ ಎಂಟೆಕ್ ಅನ್ನು ವಾರ್ಷಿಕ ಸುಮಾರು 2 ಲಕ್ಷ ರೂಪಾಯಿ ವೆಚ್ಚವಾಗುವ ಬಿಟೆಕ್ ಕೋರ್ಸ್‌ನ ಮಟ್ಟಕ್ಕೆ ತರಲು ಐಐಟಿಯ ಮಂಡಳಿ ಶುಕ್ರವಾರ ನಿರ್ಧರಿಸಿದೆ.

ಪ್ರಸ್ತುತ ಐಐಟಿಗಳಲ್ಲಿ ಎಂಟೆಕ್‌ನ ಪ್ರವೇಶ ಹಾಗೂ ಬೋಧನಾ ಶುಲ್ಕ ಪ್ರತಿ ಸೆಮಿಸ್ಟರ್‌ಗೆ 5 ಸಾವಿರದಿಂದ 10 ಸಾವಿರದ ವರೆಗೆ ಇದೆ. ತಮ್ಮ ಗೇಟ್ ಅಂಕಗಳ ಆಧಾರದಲ್ಲಿ ಎಂಟೆಕ್ ಕೋರ್ಸ್‌ಗೆ ಸೇರುವ ವಿದ್ಯಾರ್ಥಿಗಳಿಗೆ ತಿಂಗಳ 12,400 ರೂಪಾಯಿ ಶಿಷ್ಯ ವೇತನ ನೀಡುವುದನ್ನು ಐಐಟಿಗಳು ಸ್ಥಗಿತಗೊಳಿಸಲಿವೆ. ಹೊಸ ಬೋಧಕ ಸಿಬ್ಬಂದಿಯ 5 ವರ್ಷದ ಸೇವಾವಧಿ ಬಳಿಕ ಸಾಧನೆ ಪರಿಶೀಲಿಸಿ ಅವರನ್ನು ಮುಂದುವರಿಸಬೇಕೇ ? ಅಥವಾ ಕೈ ಬಿಡಬೇಕೆ ಎಂದು ನಿರ್ಧರಿಸುವ ‘ಟೆನ್ಯೂರ್ ಟ್ರಾಕ್ ಪಾಥ್‌ವೇ’ (ನೂತನ ಬೋಧಕರ ಸಾಮರ್ಥ್ಯ ಮೌಲ್ಯಮಾಪನ)ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಅಧ್ಯಕ್ಷತೆಯಲ್ಲಿ ನಡೆದ ಐಐಟಿ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಮುಂಬೈ ಐಐಟಿಯಲ್ಲಿ ಎಂಟೆಕ್‌ನ ಒಂದು ಸೆಮಿಸ್ಟರ್‌ಗೆ ಬೋಧನಾ ಶುಲ್ಕ 5000 ರೂ. ಆಗಿದ್ದರೆ, ಐಐಟಿ ದಿಲ್ಲಿಯಲ್ಲಿ 10,000 ರೂ. ಆಗಿದೆ. ಐಐಟಿ ಮದ್ರಾಸ್‌ನಲ್ಲಿ ಬೋಧನಾ ಶುಲ್ಕ 5,000 ರೂ. ಆಗಿದ್ದು, ಇದರಲ್ಲಿ 3,750 ರೂ. ಒಂದು ಬಾರಿ ಪಾವತಿಸಬೇಕಾಗಿದೆ. ಐಐಟಿ ಖರಗ್‌ಪುರ್‌ನಲ್ಲಿ ಮೊದಲ ಸೆಮಿಸ್ಟರ್ ಶುಲ್ಕ 25,950. ರೂ. ಆಗಿದ್ದು, ಇದರಲ್ಲಿ ಮರುಪಾವತಿಸಬಹುದಾದ ಶುಲ್ಕ 6,000 ರೂ. ಮತ್ತು ಮುಂದಿನ ಸೆಮಿಸ್ಟರ್‌ನ ಶುಲ್ಕ 10,550 ರೂ. 23 ಐಐಟಿಗಳಲ್ಲಿ ಏಳು ಹಳೆಯ ಸಂಸ್ಥೆಗಳಲ್ಲಿ ಸುಮಾರು 14,000 ಎಂಟೆಕ್ ವಿದ್ಯಾರ್ಥಿಗಳಿದ್ದಾರೆ. ಶುಲ್ಕ ಏರಿಕೆಯ ಸಂದರ್ಭ ಆರ್ಥಿಕ ದುರ್ಬಲ ವಿದ್ಯಾರ್ಥಿಗಳಿಗೆ ನೇರ ಲಾಭ ವರ್ಗಾವಣೆ ಅಥವಾ ಶಿಕ್ಷಣ ಸಾಲದ ಮೂಲಕ ನೆರವು ನೀಡಬೇಕು ಎಂದು ಸಲಹೆ ನೀಡಲಾಗಿದೆ.

 ಅರೆಕಾಲಿಕ ಸಹಾಯಕ ಬೋಧನ ವೇತನವನ್ನು (12,400) ರದ್ದುಗೊಳಿಸಬೇಕು ಎಂದು ಹೇಳಿರುವ ಮಂಡಳಿ, ಈ ಶುಲ್ಕದ ದೊಡ್ಡ ಮೊತ್ತವನ್ನು ಸಹಾಯಕ ಬೋಧನ ವೇತನಕ್ಕೆ ನೀಡಬೇಕು ಎಂದು ಹೇಳಿದೆ. ಈ ನಿಧಿಯನ್ನು ಇತರ ವೃತ್ತಿಪರ ಚಟುವಟಿಕೆಗಳಿಗೆ ಕೂಡ ಬಳಸಬಹುದು ಎಂದು ಅದು ಹೇಳಿದೆ. ಐಐಟಿಗಳಲ್ಲಿ ಎಂಟೆಕ್ ಕೋರ್ಸ್‌ಗೆ ಸುದಾರಣೆ ತರಲು ರೂಪಿಸಲಾದ ಮೂವರು ಸದಸ್ಯರ ಸಮಿತಿಯ ಶಿಫಾರಸಿನ ಆಧಾರದಲ್ಲಿ ಈ ಪ್ರಸ್ತಾಪ ಮಾಡಲಾಗಿದೆ. ಶುಲ್ಕ ಹೆಚ್ಚಳ ಹಾಗೂ ಶಿಷ್ಯವೇತನ ರದ್ದುಗೊಳಿಸುವುದರಿಂದ ಕೋರ್ಸ್ ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಭಾವಿಸಲಾಗಿದೆ.

 ‘ಟೆನ್ಯೂರ್ ಟ್ರಾಕ್ ಸಿಸ್ಟಮ್’ನ ಅನುಮೋದನೆಯಿಂದ ಹೊಸ ಸಿಬ್ಬಂದಿ ವರ್ಗದ ಸದಸ್ಯರ ಮೇಲೆ 5 ವರ್ಷಗಳ ಕಾಲ ನಿರ್ವಹಣೆಯ ತೂಗುಗತ್ತಿ ನೇತಾಡಲಿದೆ. ಈ ಕ್ರಮದ ಮೂಲಕ 5.5 ವರ್ಷಗಳ ಬಳಿಕ ಬಾಹ್ಯ ಸಮಿತಿ ಬೋಧನ ಸಿಬ್ಬಂದಿ ಸೇವಾವಧಿಯನ್ನು ಪರಿಶೀಲಿಸಲಿದೆ. ಸಂಸ್ಥೆಯಲ್ಲಿ ನಡೆಸಿದ ಸಂಶೋಧನೆ ಹಾಗೂ ಸೇವೆಯ ಮೌಲ್ಯ ಮಾಪನ ಅನುಸರಿಸಿ ಅವರನ್ನು ಉನ್ನತ ಸ್ಥಾನಕ್ಕೆ ಬಡ್ತಿ ನೀಡಬಹುದು ಅಥವಾ ಹುದ್ದೆ ತ್ಯಜಿಸುವಂತೆ ಕೋರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News