×
Ad

ಆಹಾರ ಶೈಲಿಯ ಬದಲಾವಣೆಯಿಂದ ಆರೋಗ್ಯದ ಬಗ್ಗೆ ಅರಿವು ಅಗತ್ಯ: ಡಾ.ವೈ.ಎಸ್.ರವಿಕುಮಾರ್

Update: 2019-09-29 17:35 IST

ಮಣಿಪಾಲ, ಸೆ.29: 40 ವಯಸ್ಸು ದಾಟಿದ ನಂತರ ಎಲ್ಲರೂ ಮಧುಮೇಹ ಮತ್ತು ಹೃದ್ರೋಗದ ಬಗ್ಗೆ ಕಾಳಜಿ ವಹಿಸುತ್ತಾರೆ. ಆದರೆ ಜಠರ, ಕರುಳು, ಪಿತ್ತಕೋಶ ಮತ್ತು ಮೇದೋಜೀರಕ ಗ್ರಂಥಿಗೆ ಸಂಬಂಧಿಸಿದ ರೋಗದ ಬಗ್ಗೆ ಗಮನ ಹರಿಸುತ್ತಿಲ್ಲ. ಇಂದಿನ ಆಹಾರಶೈಲಿಯಲ್ಲಿ ಬದಲಾವಣೆಯಾಗಿರುವು ದರಿಂದ ಯುವಜನತೆಯಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಬಹಳ ಅವಶ್ಯಕ ಎಂದು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಡಾ.ವೈ.ಎಸ್. ರವಿಕುಮಾರ್ ಹೇಳಿದ್ದಾರೆ.

ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಆಡಿಟೋರಿಯಂಯಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಅಖಿಲ ಭಾರತ ಜಠರ ಮತ್ತು ಕರುಳು ಶಾಸ್ತ್ರದ ಕರ್ನಾಟಕ ವಿಭಾಗದ ರಾಜ್ಯಮಟ್ಟದ ವಾರ್ಷಿಕ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್ ಮಾತನಾಡಿ, ವೈದ್ಯರು ತಮ್ಮ ವೃತ್ತಿ ಜೀವನದಲ್ಲಿ ಇಂದಿನ ವಿದ್ಯಾರ್ಥಿಗಳಿಗೆ ಹಳೆಯ ಮಾದರಿಯ ಶಿಕ್ಷಣದ ಬದಲಾಗಿ ಆಧುನಿಕ ರೀತಿಯಲ್ಲಿ ಶಿಕ್ಷಣ ಕೊಡಬೇಕು. ಅದಕ್ಕಾಗಿ ವೈದ್ಯರು ಪ್ರತಿ ದಿನ ಅವರ ಜ್ಞಾನಾರ್ಜನೆ ವೃದ್ಧಿಸಿಕೊಳ್ಳಬೇಕು. ಆಗ ಮಾತ್ರ ಅವರಿಗೆ ಇಂದಿನ ಯುಗದ ವೇಗದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾಹೆ ಸಹ ಉಪಕುಲಪತಿ ಡಾ.ಪೂರ್ಣಿಮಾ ಬಾಳಿಗಾ ಮಾತನಾಡಿದರು. ಕೆಎಂಸಿಯ ಡೀನ್ ಡಾ.ಶರತ್ ಕುಮಾರ್ ರಾವ್ ಮತ್ತು ಜಠರ ಮತ್ತು ಕರುಳುಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿರನ್ ಶೆಟ್ಟಿ ಉಪಸ್ಥಿತರಿದ್ದರು.

ಜಠರ ಮತ್ತು ಕರುಳುಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಸಮ್ಮೇಳನ ಅಧ್ಯಕ್ಷ ಡಾ.ಗಣೇಶ್ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊರಿಯಾ, ಬ್ರಿಟನ್ ಮತ್ತು ಪ್ರಸಿದ್ಧ ಅಂತರರಾಷ್ಟ್ರೀಯ ವೈದ್ಯರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 250 ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News