×
Ad

ಮಂಗಳೂರಿನಲ್ಲಿ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನಕ್ಕೆ ಸಿದ್ಧತೆ

Update: 2019-09-29 17:48 IST

ಮಂಗಳೂರು, ಸೆ.29: ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ‘ಕರ್ನಾಪೆಕ್ಸ್ -2019’ ಪ್ರಪ್ರಥಮ ಬಾರಿಗೆ ನಗರದ ಎಂಜಿ ರೋಡ್‌ನ ಡಾ.ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಅ.12ರಿಂದ 15ರ ವರೆಗೆ ನಡೆಯಲಿದೆ. ಅಂಚೆ ಇಲಾಖೆಯು ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸುವ ಈ ಮೇಳವು 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಆಯೋಜಿಸುತ್ತಿದ್ದು, ಭರದ ಸಿದ್ಧತೆ ನಡೆಯುತ್ತಿದೆ.

ರಾಜ್ಯಮಟ್ಟದ ಅಂಚೆ ಚೀಟಿ ಸಂಗ್ರಹಕರು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು, ಈ ಸಂದರ್ಭ ಕೇಂದ್ರದ ಮಾಜಿ ಸಚಿವ ದಿ. ಜಾರ್ಜ್ ಫೆರ್ನಾಂಡಿಸ್ ಅವರ ವಿಶೇಷ ಅಂಚೆ ಕವರ್ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಅಲ್ಲದೆ ವಿಚಾರ ಸಂಕಿರಣ, ರಸಪ್ರಶ್ನೆ, ಅನ್ವೇಷಣೆ, ಮಾಹಿತಿ, ಸಂವಾದಗಳನ್ನೂ ಆಯೋಜಿಸಲಾಗಿದೆ.

‘ಕರ್ನಾಪೆಕ್ಸ್- 2019’ರ ಅಧಿಕೃತ ಲಾಂಛನವನ್ನು ಕಲಾವಿದ ದಿನೇಶ್ ಹೊಳ್ಳ ರಚಿಸಿದ್ದಾರೆ. ಸ್ಟ್ಯಾಂಪ್‌ಗಳ ಜತೆ ವಿವಿಧ ಕಾರ್ಡ್‌ಗಳ ಪ್ರದರ್ಶನವಿದೆ. ಗ್ರಾಹಕರು ಅಂಚೆ ಕಚೇರಿಯಲ್ಲಿ 200 ರೂ. ಪೋಸ್ಟೇಜ್ ಡೆಪಾಸಿಟ್ ಖಾತೆ ತೆರೆದು ಅಂಚೆ ಚೀಟಿ, ಲಕೋಟೆ, ಮಿನಿಯೇಚರ್ ಹಾಳೆ ಇತ್ಯಾದಿಗಳನ್ನು ಪಡೆದುಕೊಳ್ಳುವ ವ್ಯವಸ್ಥೆಯೂ ಇದೆ.

ಪಾಂಡೇಶ್ವರದ ಪ್ರಧಾನ ಅಂಚೆ ಕಚೇರಿಯಲ್ಲಿ ಈಗಾಗಲೇ ನವೀಕೃತ ಫಿಲಾಟೆಲಿಕ್ ಬ್ಯೂರೊ ನಿರ್ಮಿಸಿದ್ದು, ಅದರ ಬಗ್ಗೆಯೂ ಪ್ರದರ್ಶದಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳದಲ್ಲೇ ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆ ತೆರೆಯಲು, ಗ್ರಾಮೀಣ ಅಂಚೆ ಜೀವ ವಿಮಾ ಮಾಡಲು ಅವಕಾಶ ಇದೆ ಎಂದು ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ತಿಳಿಸಿದ್ದಾರೆ.

ಪೋಸ್ಟಲ್ ಕ್ವಿಝ್: ಕರ್ನಾಪೆಕ್ಸ್‌ನ ಪೂರ್ವಭಾವಿಯಾಗಿ ಈಗಾಗಲೆ ರಾಜ್ಯಮಟ್ಟದಲ್ಲಿ ಪ್ರಾದೇಶಿಕ ಮಟ್ಟದ ಮೂರು ಕ್ವಿಝ್ (ಧಾರವಾಡ, ಬೆಂಗಳೂರು, ಮಂಗಳೂರು) ನಡೆಸಲಾಗಿದೆ. ವಿಜೇತರಿಗೆ ಅ.13ರಂದು ಅಂತಿಮ ಹಂತದ ಕ್ವಿಝ್ ಡಾ.ಟಿಎಂಎ ಪೈ ಹಾಲ್‌ನಲ್ಲಿ ನಡೆಯಲಿದೆ.

600 ಪ್ರೇಮ್‌ಗಳ ಪ್ರದರ್ಶನ

ಕರ್ನಾಪ್ಲೆಕ್ಸ್‌ನಲ್ಲಿ ಅಂಚೆ ಚೀಟಿಗಳ ಪ್ರದರ್ಶನಕ್ಕೆ ಆನ್‌ಲೈನ್ ಮೂಲಕ ಆಹ್ವಾನ ನೀಡಿದ್ದು, ಪ್ರವೇಶ ಪತ್ರಗಳು ಬರುತ್ತಿವೆ. ಸುಮಾರು 600 ಪ್ರೇಮ್‌ ಗಳಲ್ಲಿ ಪ್ರದರ್ಶನ ನಡೆಯಲಿದೆ. ಅದರಲ್ಲಿ ವಿಭಿನ್ನ ವಿಷಯಗಳ ಅಂಚೆ ಚೀಟಿಗಳಿರಲಿವೆ. ಪ್ರತಿಯೊಬ್ಬ ಅಂಚೆ ಚೀಟಿಗಾರರು ತಮ್ಮದೇ ಅಭಿರುಚಿಯ ವೈವಿಧ್ಯಮಯ ಸ್ಟ್ಯಾಂಪ್‌ಗಳನ್ನು ಹೊಂದಿದ್ದು, ಅದನ್ನು ಪ್ರತ್ಯೇಕ ಪ್ರೇಮ್‌ ಗಳಲ್ಲಿ ಪ್ರದರ್ಶನ ಮಾಡಲಿದ್ದಾರೆ.

ಸ್ಪಾಟ್‌ನಲ್ಲಿ ಸ್ಟಾಂಪ್

 ತಮ್ಮ ಸ್ವಂತ ಭಾವಚಿತ್ರದ ಮೈ ಸ್ಟ್ಯಾಂಪ್ ಮಾಡಿಕೊಳ್ಳಲು ಇಲ್ಲಿ ಅವಕಾಶ ಇದೆ. ಸಾರ್ವಜನಿಕರು ತಮ್ಮ ೆಟೊ ತಂದು ಅಥವಾ ಸ್ಥಳದಲ್ಲೇ ಫೋಟೊ ತೆಗೆಸಿ 300 ರೂ. ನೀಡಿ ಒಂದು ಶೀಟ್ ಸ್ಟ್ಯಾಂಪ್‌ಗಳನ್ನು ಮಾಡಿಸಿಕೊಳ್ಳಬಹುದು. ಅದನ್ನು ಪೋಸ್ಟ್ ಕಾರ್ಡ್‌ಗೆ ಬಳಸಬಹುದು.

ಮುಕ್ತ ಅವಕಾಶ

ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತಾಗಲು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಮೂಲಕ ಶಾಲೆಗಳಿಗೆ ಮಾಹಿತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಆ ಮೂಲಕ ಮಹತ್ವದ ವಿಷಯಗಳನ್ನು ಅರಿಯಲು ಅವಕಾಶವಿದೆ ಎಂದು ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಎನ್. ತಿಳಿಸಿದ್ದಾರೆ.

ಅಂಚೆ ಇಲಾಖೆಯಿಂದ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕರ್ನಾಪೆಕ್ಸ್ ಮೇಳವು 60 ವರ್ಷಗಳಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿದೆ. ಇಲ್ಲಿ ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನ ಆಯೋಜಿಸಿದ್ದು, ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ.

- ಹರ್ಷ ಎನ್.,
ಹಿರಿಯ ಅಂಚೆ ಅಧೀಕ್ಷಕ, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News