×
Ad

ಕೋಟೆಕಾರ್ ಪಪಂನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2019-09-29 17:55 IST

ಉಳ್ಳಾಲ, ಸೆ.29: ಆರೋಗ್ಯ ಚೆನ್ನಾಗಿದೆ ಎಂದು ಭಾವಿಸಿ ನಿರ್ಲಕ್ಷ್ಯ ಭಾವನೆ ತಾಳುವುದು ಸರಿಯಲ್ಲ. ಆಯಾಯ ಸಮಯದಲ್ಲಿ ತಪಾಸಣೆ ಮಾಡಿಸುತ್ತಾ ಕಾಯಿಲೆ ಬರುವ ಮೊದಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಾಗ ಶರೀರದಲ್ಲಿರುವ ಪ್ರತಿಯೊಂದು ಅತ್ಯಮೂಲ್ಯ ಅಂಗಗಳನ್ನೂ ಕಾಪಾಡಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾರದಾ ಅಭಿಪ್ರಾಯಪಟ್ಟರು.

ಕೋಟೆಕಾರ್ ಪಟ್ಟಣ ಪಂಚಾಯತ್ ವತಿಯಿಂದ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮತ್ತು ರೋಟರಿ ಕ್ಲಬ್ ಸಹಯೋಗದಲ್ಲಿ ಪಪಂನಲ್ಲಿ ರವಿವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಆರೋಗ್ಯವಂತ ಮಕ್ಕಳಿಂದ ನಾಳಿನ ಭವ್ಯ ಭಾರತ ನಿರ್ಮಾಣ ಸಾಧ್ಯ, ತಾಯಿಯ ಆರೋಗ್ಯವೂ ಚೆನ್ನಾಗಿರಬೇಕಿದ್ದರೆ ಮಗುವಿನ ಆರೋಗ್ಯವೂ ಚೆನ್ನಾಗಿರುತ್ತದೆ. ಮಗು ನೋಡಲು ಸುಂದರ, ತೂಕದಲ್ಲಿ ಮಾತ್ರ ಚೆನ್ನಾಗಿದ್ದರೆ ಸಾಲದು, ಆರೋಗ್ಯದಲ್ಲೂ ಚೆನ್ನಾಗಿರಬೇಕು. ಇಂತಹ ಮಕ್ಕಳನ್ನು ಪ್ರೋತ್ಸಾಹಿಸಲು ಉತ್ತಮ ಮಗು ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆಯ ವ್ಯವಸ್ಥಾಪಕ ವಿಶ್ವನಾಥ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಆಯುಶ್ಮಾನ್ ಯೋಜನೆಯಡಿ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಿಲ್ಲ, ಅದಕ್ಕಿಂತ ಮೊದಲು ಸರಕಾರಿ ಆಸ್ಪತ್ರೆಗೆ ಹೋಗಿ ಶಿಫಾರಸ್ಸು ಪತ್ರ ಪಡೆದುಕೊಳ್ಳಬೇಕು. ರೋಗಿ ಗಂಭೀರವಾಗಿದ್ದ ಸಂದರ್ಭ ಸರಕಾರಿ ಆಸ್ಪತ್ರೆಯ ವೈದ್ಯರ ಪತ್ರ ಕಾಯುವುದು ಕಷ್ಟಕರ ಆಗಿರುವುದರಿಂದ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯವಂತ ಮಕ್ಕಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. 40 ಫಲಾನುಭವಿಗಳಿಗೆ ಹಸಿತ್ಯಾಜ್ಯ ವಿಲೇವಾರಿಗೆ ಪೈಪ್‌ಗಳನ್ನು ವಿತರಿಸಲಾಯಿತು.

ರೋಟರಿ ಕ್ಲಬ್ ಜಿಲ್ಲಾ ಕಾರ್ಯದರ್ಶಿ ವಿಕ್ರಂ ದತ್ತಾ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಕೋಟೆಕಾರ್ ಪಪಂ ಉಪಾಧ್ಯಕ್ಷೆ ಭಾರತಿ ರಾಘವ, ನೇತ್ರತಜ್ಣೆ ಡಾ.ವೈಷ್ಣವಿ, ಸಾಮಾನ್ಯ ಔಷಧ ವಿಭಾಗ ಡಾ. ಭಾನುಶ್ರೀ, ಮಾಜಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸುಳ್ಳೆಂಜೀರು, ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶಿಬಿರ ಸಂಯೋಜಕ ಅಕ್ಷಯ್ ಉಪಸ್ಥಿತರಿದ್ದರು.

ಪಪಂ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಆರೋಗ್ಯ ನಿರೀಕ್ಷಕ ಪೈಪ್ ಕಾಂಪೋಸ್ಟ್ ಬಗ್ಗೆ ಮಾಹಿತಿ ನೀಡಿದರು. ಸಿಬ್ಬಂದಿ ರವಿ ಕೊಂಡಾಣ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News