×
Ad

​ದೇರಳಕಟ್ಟೆಯಲ್ಲಿ ವಿಶ್ವಹೃದಯ ದಿನಾಚರಣೆ

Update: 2019-09-29 18:10 IST

ಕೊಣಾಜೆ:  ರೋಟರಿಕ್ಲಬ್ ದೇರಳಕಟ್ಟೆ ಹಾಗೂ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಆಶ್ರಯದಲ್ಲಿ ವಿಶ್ವಹೃದಯ ದಿನಾಚರಣೆ ರವಿವಾರ ದೇರಳಕಟ್ಟೆ ಕ್ಷೇಮ ಕ್ಯಾಂಪಸ್‍ನ ಎ.ಬಿ.ಶೆಟ್ಟಿ ದಂತ ವಿಜ್ಞಾನ ಸಂಸ್ಥೆಯ ವಿಂಶತಿಭವನದಲ್ಲಿ ನಡೆಯಿತು.

ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಪ್ರೊ.ಶಾಂತರಾಮ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರೋಗ್ಯದ ವಿಚಾರದಲ್ಲಿ ನಾವು ಕಾಳಜಿ ವಹಿಸುವುದು ಬಹಳ ಅಗತ್ಯವಾಗಿದ್ದು, ಅದರಲ್ಲೂ ಇಂದಿನ ದಿನಗಳಲ್ಲಿ ಹೃದಯದ ವಿಚಾರದಲ್ಲಿ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವುದು ಅತೀ ಅವಶ್ಯಕವಾಗಿದೆ ಎಂದರು.

ಆರೋಗ್ಯ, ಶಿಕ್ಷಣ, ಸಮಾಜಸೇವೆಯ ಕ್ಷೇತ್ರದಲ್ಲಿ ರೋಟರಿ ಕ್ಲಬ್ ಹಲವಾರು ಮಾದರಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.  ದೇರಳಕಟ್ಟೆ ರೋಟರಿ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎ.ಜೆ.ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಅಕಾಡೆಮಿಯ ಮೆಡಿಸಿನ್ ವಿಭಾಗದ ಡಾ.ಬಿ.ದೇವದಾಸ್ ರೈ ಅವರು, ಇತ್ತಿಚೆಗೆ ಸಣ್ಣ ವಯಸ್ಸಿನವರಲ್ಲಿಯೂ ಹೃದಯಕ್ಕೆ ಸಂಬಂಧಿಸಿದ ಹಲವಾರು ಕಾಯಲೆಗಳು ಕಾಣಿಸಿಕೊಳ್ಳು ತ್ತಿರುವುದನ್ನು ನಾವು ಗಮನಿಸಬಹುದಾಗಿದೆ. ದೂಮಪಾನದಂತಹ ದುಶ್ಚಟಗಳನ್ನು ದೂರವಿಡುವುದರೊಂದಿಗೆ ಹೃದಯದ ಆರೋಗ್ಯಕ್ಕೆ ಸಂಬಂಧಿಸಿ ಕಾಳಜಿ ವಹಿಸಿಕೊಳ್ಳಬೇಕಿದೆ. ಆರೋಗ್ಯವಂತ ಹೃದಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯತೆಯಾಗಿರಲಿ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‍ನ ಝೋನ್ 3ರ ಅಸಿಸ್ಟೆಂಟ್ ಗವರ್ನರ್ ಸುಮಿತ್ ಎಸ್.ರಾವ್, ವೈದ್ಯರಾದ ಡಾ.ಸುಬ್ರಹ್ಮಣ್ಯಂ ಕೆ,  ಡಾ.ಶ್ರೀಕೃಷ್ಣ ಆಚಾರ್ಯ, ಡಾ.ಪ್ರೇರಣಾ ಹೆಗ್ಡೆ, ಸಮಾಜಶಾಸ್ತ್ರಜ್ಞೆ ಡಾ.ಅನಿತಾ ರವಿಶಂಕರ್, ರೋಟರಿ ಕ್ಲಬ್ ಕಾರ್ಯದರ್ಶಿ ವಿಕ್ರಮದತ್ತ, ಜೆ.ಪಿ.ರೈ, ಅರ್ಜುನ್ ಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಡಾ.ರವಿಶಂಕರ್ ರಾವ್ ಸ್ವಾಗತಿಸಿ, ರೋಟರೇಕ್ಟ್ ಕ್ಲಬ್ ಅಧ್ಯಕ್ಷೆ ತಪಸ್ಯ ರವಿಶಂಕರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News