ಭಾರತದಲ್ಲಿ 7 ಲಕ್ಷ ಕೋಟಿ ರೂ. ಹೂಡಿಕೆಗೆ ಸೌದಿ ನಿರ್ಧಾರ
ಹೊಸದಿಲ್ಲಿ,ಸೆ.29: ಜಗತ್ತಿನ ಅತೀದೊಡ್ಡ ತೈಲ ರಫ್ತುದಾರ ದೇಶ ಸೌದಿ ಅರೇಬಿಯ ಭಾರತದಲ್ಲಿ ನೂರು ಬಿಲಿಯನ್ ಡಾಲರ್ (7 ಲಕ್ಷ ಕೋಟಿ ರೂ.) ಹೂಡಿಕೆ ಮಾಡಲು ನಿರ್ಧರಿಸಿದೆ. ಭಾರತದ ಅಭಿವೃದ್ಧಿ ಸಾಮರ್ಥ್ಯವನ್ನು ಪರಿಗಣಿಸಿರುವ ಸೌದಿ ಅರೇಬಿಯ ಪೆಟ್ರೋಕೆಮಿಕಲ್ಸ್, ಮೂಲಭೂತ ಸೌಕರ್ಯ, ಮತ್ತು ಗಣಿಗಾರಿಕೆ ಹಾಗೂ ಇತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಬಯಸಿದೆ.
ಸೌದಿ ಅರೇಬಿಯಕ್ಕೆ ಭಾರತ ಒಂದು ಆಕರ್ಷಕ ಹೂಡಿಕೆ ತಾಣವಾಗಿದೆ ಮತ್ತು ತೈಲ, ಅನಿಲ ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ಅದು ಭಾರತದೊಂದಿಗೆ ದೀರ್ಘಕಾಲೀನ ಜೊತೆಗಾರಿಕೆಯತ್ತ ಕಣ್ಣಿಟ್ಟಿದೆ ಎಂದು ಸೌದಿ ರಾಯಭಾರಿ ಡಾ. ಸೌದ್ ಬಿನ್ ಮುಹಮ್ಮದ್ ಅಲ್ ಸತಿ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸೌದಿ ಅರೇಬಿಯ ಭಾರತದಲ್ಲಿ ಇಂಧನ, ಸಂಸ್ಕರಣೆ, ಪೆಟ್ರೋಕೆಮಿಕಲ್ಸ್, ಮೂಲಭೂತ ಸೌಕರ್ಯಾಭಿವೃದ್ಧಿ, ಕೃಷಿ, ಖನಿಜ ಮತ್ತು ಗಣಿಗಾರಿಕೆ ಕ್ಷೇತ್ರದಲ್ಲಿ ನೂರು ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಬಯಸಿದೆ ಎಂದು ಅವರು ತಿಳಿಸಿದ್ದಾರೆ.
ಸೌದಿ ಅರೇಬಿಯದ ಅತೀದೊಡ್ಡ ತೈಲ ಸಂಸ್ಥೆ ಆರಾಮ್ಕೆ ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಲಿ. ಜೊತೆ ಜೊತೆಗಾರಿಕೆ ನಡೆಸಲು ಪ್ರಸ್ತಾವ ಮಾಡಿರುವುದು ಎರಡು ದೇಶಗಳ ವೃದ್ಧಿಸುತ್ತಿರುವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂದು ಅಲ್ ಸತಿ ಅಭಿಪ್ರಾಯಿಸಿದ್ದಾರೆ. ಸೌದಿ ಅರೇಬಿಯದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರ ವಿಶನ್ 2030ಯಿಂದ ಭಾರತ ಮತ್ತು ಸೌದಿ ಅರೇಬಿಯ ಮಧ್ಯೆ ವಿಭಿನ್ನ ಕ್ಷೇತ್ರಗಳಲ್ಲಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ಏರಿಕೆಯಾಗಲಿದೆ ಎಂದು ಅಲ್ ಸತಿ ತಿಳಿಸಿದ್ದಾರೆ.