‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಆಯ್ಕೆಯಾದ ಆರೂರು ಗ್ರಾಪಂ

Update: 2019-09-29 14:10 GMT

ಬ್ರಹ್ಮಾವರ, ಸೆ.29: ಕೇವಲ ನಾಲ್ಕು ವರ್ಷಗಳ ಹಿಂದೆ (2015ರಲ್ಲಿ) ಅಸ್ತಿತ್ವಕ್ಕೆ ಬಂದು, ಈ ಸಣ್ಣ ಅವಧಿಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಪಂ, ತನ್ನ ಸಾಧನೆಯ ಕಿರೀಟಿಕ್ಕೆ ತುರಾಯಿ ಎಂಬಂತೆ ಇದೀಗ 2018-19ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಆರೂರು ಗ್ರಾಪಂ ನಾಲ್ಕು ವರ್ಷಗಳ ನಂತರ ಕುಂಜಾಲಿನಲ್ಲಿ ನಿರ್ಮಾಣ ಗೊಂಡ ಹೊಸ ಪಂಚಾಯತ್ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆರೂರು ಗ್ರಾಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ 35 ಕುಟುಂಬಗಳು, 200ಕ್ಕೂ ಹೆಚ್ಚು ಪರಿಶಿಷ್ಟ ಪಂಗಡದ ಕುಟುಂಬಗಳಿದ್ದು, 5ಅಂಗನವಾಡಿ, ಒಂದು ಹಿರಿಯ, ಒಂದು ಕಿರಿಯ ಪ್ರಾಥಮಿಕ ಮತ್ತು ಒಂದು ವಸತಿ ಶಾಲೆಗಳನ್ನು ಹೊಂದಿದೆ.

14ನೇ ಹಣಕಾಸು ಯೋಜನೆಯಡಿ ಅನುದಾನವನ್ನು ವಲಯವಾರು ಸಂಪೂರ್ಣ ಸಮರ್ಪಕವಾಗಿ ಬಳಕೆ, ವರ್ಗ1ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಕ್ರೀಡೆ, ಅಂಗವಿಕಲರಿಗೆ ಕಾದಿರಿಸುವಿಕೆ ಅನುದಾನದ ಸಂಪೂರ್ಣ ಬಳಕೆ, ಸಂಪನ್ಮೂಲ ಕ್ರೋಢೀಕರಣದ ಮುಖ್ಯ ಆಧಾರ ವಾಗಿರುವ ತೆರಿಗೆ ವಸೂಲಾತಿಯಲ್ಲಿ ಶೇ.98 ಸಾಧನೆ ಮಾಡಿರುವ ಹೆಗ್ಗಳಿಕೆ ಈ ಗ್ರಾಪಂಗಿದೆ.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಹಾಗೂ ಪರಿಣಾಮಕಾರಿ ಅನುಷ್ಟಾನ, ಗ್ರಾಪಂ ವ್ಯಾಪ್ತಿಯಲ್ಲಿ 13.01ಲಕ್ಷ ರೂ. ಅನುದಾನವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತುತ ಸಾಲಿನಲ್ಲಿ ಖರ್ಚು, ನಿಯಮಿತವಾದ ಗ್ರಾಮ ಸಭೆ, ಸಾಮಾನ್ಯ ಸಭೆ, ಸ್ಥಾಯಿ ಸಮಿತಿ ಸಭೆಗಳು ಮತ್ತು ಇತರ ಮಾಹಿತಿ ಸಭೆಗಳ ಆಯೋಜನೆ, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ, ಗ್ರಾಮಸ್ಥರಿಗೆ ಪಂಚಾಯತ್ ಮತ್ತು ಗ್ರಾಮದಲ್ಲಿ ನಡೆಯುವ ವಿದ್ಯಮಾನಗಳು ಮತ್ತು ಸಮಸ್ಯೆಗಳ ಬಗ್ಗೆ ಅಧ್ಯಕ್ಷರು, ಪಿಡಿಒ, ಸದಸ್ಯರುಗಳಿಗೆ ವಾಟ್ಸಾಪ್ ಗ್ರೂಪ್‌ಗಳ ಮೂಲಕ ಸಂದೇಶ ರವಾನಿಸುವ ಅವಕಾಶ ಮತ್ತು ಸಲಹೆ ಸೂಚನೆಗಳನ್ನು ನೀಡುವ ಅವಕಾಶವನ್ನು ಒದಗಿಸಲಾಗಿದೆ. ಇದು ಗ್ರಾಮದ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಕಾರಾಣವಾಗಿದೆ.

ವಿದ್ಯುತ್ ಹಾಗೂ ಕುಡಿಯುವ ನೀರಿನ ಅಪವ್ಯಯ ತಡೆಯಲು ಓವರ್ ಹೆಡ್ ಟ್ಯಾಂಕ್‌ಗೆ ಮೊಬೈಲ್ ವಾಟರ್ ಲೆವೆಲ್ ಕಂಟ್ರೋಲರ್ ಅಳವಡಿಕೆ, ಗ್ರಾಮದಲ್ಲಿ ದಾರಿದೀಪ, ಸೋಲಾರ್ ದೀಪಗಳ ಅಳವಡಿಕೆ, ಸ್ವಚ್ಛತೆಗೆ ತ್ಯಾಜ್ಯ ನಿರ್ಮೂಲನೆಗೆ ವಿಶೇಷ ಕ್ರಮ, ಹೀಗೆ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಾ ಬರಲಾಗಿದೆ.

ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ, ಸರಕಾರದ ಸವಲತ್ತು ನೋಂದಣಿ, ಮಾಹಿತಿ ಶಿಬಿರ, ಮೆಸ್ಕಾಂ ಜತೆಗೂಡಿ ವಿದ್ಯುತ್ ಸರಬರಾಜಿಗೆ ತೊಂದರೆ ಆಗುತ್ತಿರುವ ಮರದ ಕೊಂಬೆಗಳನ್ನು ಕಡಿಯುವುದಕ್ಕೆ ಸಹಕಾರ ಹೀಗೆ ಗ್ರಾಪಂ, ಗ್ರಾಮದಲ್ಲಿ ನಿರಂತರವಾಗಿ ಕಾರ್ಯಕ್ರಮ, ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತಾ ಬಂದಿದೆ.

ಸರಕಾರದ ಮಾನದಂಡಗಳ ಪ್ರಕಾರದ ಅನುಪಾತದಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿ ಮೊದಲ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರಕಿರು ವುದರಿಂದ ಗ್ರಾಮಸ್ಥರು ಹೆಮ್ಮೆ ಪಡುತಿದ್ದಾರೆ. ಇದೇ ಆ.2ರಂದು ಬೆಂಗಳೂರಿನಲ್ಲಿ ನಡೆಯುವ ಗಾಂಧಿ ಜಯಂತಿ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ರಾಜೀವ ಕುಲಾಲ್ ಹಾಗೂ ಪಿಡಿಒ ಗೀತಾ ಬಾಳಿಗಾ ಅವರು ಮುಖ್ಯಮಂತ್ರಿಗಳಿಂದ ಸ್ವೀಕರಿಸಲಿದ್ದಾರೆ.

‘ಗ್ರಾಪಂನ ಸರ್ವಾಂಗೀಣ ಅಭಿವೃದ್ಧಿಯನ್ನು ಗುರುತಿಸಿ ರಾಜ ಸರಕಾರ ನೀಡಿರುವ ಈ ಪುರಸ್ಕಾರ ಸಂತೋಷ ತಂದಿದೆ. ಇದಕ್ಕೆ ಸಹಕಾರ ನೀಡಿದ ಗ್ರಾಮಸ್ಥರನ್ನು ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಗ್ರಾಪಂನ ಸಂಪನ್ಮೂಲ ಹೆಚ್ಚಿಸುವಲ್ಲಿ , ಅರ್ಹರಿಗೆ ಮನೆ ನಿವೇಶನ, ಸುಸಜ್ಜಿತ ಸ್ಮಶಾನ ನಿರ್ಮಾಣ, ಸಭಾಭವನ ರಚನೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡಲಾಗುವುದು.

-ರಾಜೀವ ಕುಲಾಲ್, ಆರೂರು ಗ್ರಾಪಂ ಅಧ್ಯಕ್ಷ

‘ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿರುವ ನಮ್ಮ ಪಂಚಾಯತ್ ತಂಡವು ಸತತ ಪ್ರಯತ್ನದಿಂದ, ಮೇಲಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ಇನ್ನೂ ಮುಂದೆಯೂ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಇದು ಸ್ಪೂರ್ತಿಯನ್ನು ನೀಡಿದೆ.’

- ಗೀತಾ ಬಾಳಿಗಾ, ಪಿಡಿಓ ಆರೂರು ಗ್ರಾಪಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News