×
Ad

ವಿಟ್ಲ : ಹೆದ್ದಾರಿಯ ಐದು ಅಂಗಡಿಗಳಿಗೆ ನುಗ್ಗಿ ಕಳವು

Update: 2019-09-29 22:37 IST

ವಿಟ್ಲ : ಹೆದ್ದಾರಿ ಅಕ್ಕಪಕ್ಕದ ಐದು ಅಂಗಡಿಗಳ ಬಾಗಿಲು ಹಾಗು ಶಟರ್ ಗಳ ಬೀಗ ಮುರಿದು, ಹಣ ಮತ್ತು ಸಿಗರೇಟ್  ಕಳ್ಳತನ ಮಾಡಿದ ಘಟನೆ ಅಡ್ಯನಡ್ಕ ಪೇಟೆಯಲ್ಲಿ ರವಿವಾರ ನಡೆದಿದೆ.

ಅಡ್ಯನಡ್ಕ ಮೇಗಿನಪೇಟೆಯ ವಾಸುದೇವ ನಾಯಕ್ ಅವರಿಗೆ ಸೇರಿದ ದಿನಸಿ ಅಂಗಡಿಯಿಂದ 60 ಸಾವಿರ ರೂ. ನಗದು, 30ಸಾವಿದ ರೂ. ಮೌಲ್ಯದ ಸಿಗರೇಟ್, ಸಿಸಿ ಕ್ಯಾಮೆರಾ ಸಂಪರ್ಕಿಸಿದ್ದ ಕಂಪೂಟರ್ ಮಾನಿಟರ್ ಅನ್ನು ಕಳವು ಗೈಯಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಅಡ್ಯನಡ್ಕ ಪೇಟೆಯ ದೇವಾನಂದ ಶೆಣೈ ಎಂಬವರ ದಿನಸಿ ಅಂಗಡಿಯ ಬಾಗಿಲ ಕೀ ತುಂಡರಿಸಿ 500 ರೂ. ಚಿಲ್ಲರೆ ಹಣ ಕಳವು ಮಾಡಕಾಗಿದೆ. ಮುಂಭಾಗದಲ್ಲಿರುವ ಶೇಖರ್ ಕೆ. ಎಂಬವರ ಸ್ಟುಡಿಯೋ ಶಟರ್ ಬೀಗ ಮುರಿದು ಡಬ್ಬಗಳಲ್ಲಿಟ್ಟಿದ್ದ ನಾಣ್ಯ ಸೇರಿ 10 ಸಾವಿರ ಕಳವು ಮಾಡಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಅಡ್ಯನಡ್ಕ ರಿಕ್ಷಾ ನಿಲ್ದಾಣದ ಮುಂಭಾಗದಲ್ಲಿರುವ ರಾಧಾಕೃಷ್ಣ ನಾಯಕ್ ಎಂಬವರ ಬ್ಯಾಗ್ ಅಂಗಡಿ ಶಟರ್ ತೆರೆದ ಹಣಕ್ಕಾಗಿ ಜಾಲಾಡಿದ್ದಾರೆ. ಟೇಬಲ್ ಡ್ರಾಯರ್ ನಲ್ಲಿದ್ದ ದಾಖಲೆಗಳನ್ನು ತೆಗೆದು ಹುಡುಕಾಡಿ ವಿಫಲ ಯತ್ನ ನಡೆದಿದೆ.

ಅಡ್ಯನಡ್ಕ ಶಾಲೆಯ ಸಮೀಪದಲ್ಲಿರುವ ರೋಹಿತಾಶ್ವ ಎಂಬವರಿಗೆ ಸೇರಿದ ದಿನಸಿ ಅಂಗಡಿಯಿಂದ 10 ರೂ. ಕಾಯಿನ್ ಮತ್ತು ನೋಟು, 20 ನೋಟುಗಳ ಕಟ್ಟು, ರೂಮ್ ಬಾಡಿಗೆ ತೆಗೆದಿಟ್ಟ ಹಣ ಸಹಿತ 20 ಸಾವಿರ ರೂ. ಕಳವಾಗಿರುವ ಬಗ್ಗೆ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು. ಶ್ವಾನ ದಳ ಪೇಟೆಯಲ್ಲಿ ಪ್ರತಿ ಅಂಗಡಿಯ ಬಳಿಗೆ ಹೋಗಿದ್ದು, ಸಾರ್ವಜನಿಕ ಶೌಚಾಲಯದ ತನಕವೂ ಹೋಗಿ ನಿಂತಿದೆ. ಸಿಸಿ ಕ್ಯಾಮೆರಾ ವೊಂದರಲ್ಲಿ  ಚಲನವಲನ ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಇದನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಎಡಿಶನಲ್ ಎಸ್ ಪಿ ಡಾ. ವಿಕ್ರಮ್ ಅಮ್ಟೆ, ಎಎಸ್‍ಪಿ ಸೈದುಲು ಅಡಾವತ್, ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಎ ಎಸ್ ಐ ದನಂಜಯ, ಪ್ರೊಬೇಷನರಿ ಎಸ್ ಐ ರಾಜೇಶ್ ಸ್ಥಳಕ್ಕೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News