ಭದ್ರತಾ ಪಡೆ ಸಿಬ್ಬಂದಿಗೆ ಮನೆ ಬಾಡಿಗೆಗೆ ನೀಡುವಂತೆ ಕಿರುಕುಳ: ಶ್ರೀನಗರ ನಿವಾಸಿಗಳ ಆರೋಪ

Update: 2019-09-29 18:23 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಸೆ.29: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅರೆಸೇನಾ ಪಡೆ ಸಿಬ್ಬಂದಿಗಳಿಗೆ ನಗರದ ಪ್ರಮುಖ ವಾಣಿಜ್ಯಕೇಂದ್ರ ಪ್ರದೇಶಗಳಲ್ಲಿ ಮನೆಗಳನ್ನು ಬಾಡಿಗೆಗೆ ನೀಡುವಂತೆ ಒತ್ತಡ ಹಾಕಿ ಕಿರುಕುಳ ನೀಡಲಾಗುತ್ತಿದೆ ಎಂದು ಶ್ರೀನಗರದ ನಿವಾಸಿಗಳು ಆರೋಪಿಸಿದ್ದಾರೆ. ಇದಕ್ಕೆ ನಿರಾಕರಿಸಿದರೆ ಪೊಲೀಸರು ಮನೆಯಿಂದ ಓಡಿಸುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.

ಆಗಸ್ಟ್ 5ರಂದು 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಹಲವು ಸಾವಿರ ಅರೆಸೇನಾ ಪಡೆ ಸಿಬಂದಿಯನ್ನು ನಿಯೋಜಿಸಲಾಗಿದೆ. ಇವರು ಈಗ ಸೇನಾ ಶಿಬಿರ ಅಥವಾ ಸರಕಾರಿ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಕೆಲವೆಡೆ ನಿರ್ಮಾಣ ಹಂತದಲ್ಲಿರುವ ಕಟ್ಟಡ ಅಥವಾ ಖಾಲಿ ಇರುವ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಚಳಿಗಾಲ ಸಮೀಪಿಸುತ್ತಿರುವ ಕಾರಣ ಜಮ್ಮು ಕಾಶ್ಮೀರದಲ್ಲಿ ವಾಸಕ್ಕೆ ಬೆಚ್ಚನೆಯ ಮನೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಮನೆಗೆ ನಿರಂತರ ಭೇಟಿ ನೀಡುತ್ತಿರುವ ಪೊಲೀಸರು ಮನೆ ಬಾಡಿಗೆಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

 “ಪ್ರಥಮ ಮಹಡಿಯಲ್ಲಿ ನೀವು ವಾಸಿಸಿ, ಉಳಿದ ಮನೆಯನ್ನು ಬಾಡಿಗೆಗೆ ನೀಡಿ” ಎಂದು ಒತ್ತಾಯಿಸುತ್ತಿದ್ದಾರೆ. ನಿರಾಕರಿಸಿದರೆ ಗದರಿಸಿ ನಿಂದಿಸುತ್ತಾರೆ. ಅಲ್ಲದೆ ಕರೆ ಮಾಡಿ ಬೆದರಿಸುತ್ತಿದ್ದಾರೆ ಎಂದು ಸ್ಥಳೀಯ ಮಹಿಳೆಯರು ದೂರಿದ್ದಾರೆ.

ಬಾಡಿಗೆ ನೀಡಲು ನಿರಾಕರಿಸುವ ಮನೆಯವರಿಗೆ ಮತ್ತೊಂದು ರೀತಿಯ ಕಿರುಕುಳ ಎದುರಾಗಿದೆ. ರಾತ್ರಿ ಗಸ್ತು ತಿರುಗುವ ನೆಪದಲ್ಲಿ ಮನೆಯ ಬಳಿ ಬಂದು ಮನೆಯ ಹೊರಗಿರುವ ಮಕ್ಕಳನ್ನು ಬಂಧಿಸಿ ಕರೆದೊಯ್ಯಲು ಪ್ರಯತ್ನಿಸಿದ್ದಾರೆ ಎಂದೂ ಕೆಲವರು ಆರೋಪಿಸಿದ್ದಾರೆ. ಪೊಲೀಸರು ವಸತಿ ಪ್ರದೇಶದಲ್ಲಿ ಮುಳ್ಳುತಂತಿ ಬೇಲಿ ಹಾಕಿರುವುದನ್ನು ಸ್ಥಾನಿಕ ಕಲ್ಯಾಣ ಸಂಘದ ಅಧ್ಯಕ್ಷರು ಆಕ್ಷೇಪಿಸಿ ಪ್ರತಿಭಟಿಸಿದಾಗ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ. ಇಲ್ಲಿ ಪೊಲೀಸರು ನಿರಂತರ ಗಸ್ತು ತಿರುಗಿ ಬ್ಯಾರಿಕೇಡ್ ನಿರ್ಮಿಸಿರುವ ಕಾರಣ ಮಹಿಳೆಯರಿಗೆ ಅನಾನುಕೂಲವಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.

ಆದರೆ ಮನೆಬಾಡಿಗೆ ನೀಡುವಂತೆ ಯಾರಿಗೂ ಒತ್ತಡ ಹಾಕಿಲ್ಲ ಅಥವಾ ಕಿರುಕುಳ ನೀಡಿಲ್ಲ. ಮನೆ ಬಾಡಿಗೆಗೆ ಪಡೆಯುವಾಗ ಇಲಾಖೆಯ ನಿಯಮವನ್ನು ಪಾಲಿಸುತ್ತೇವೆ. ಈ ಪ್ರದೇಶದಲ್ಲಿ ಭದ್ರತಾ ಪಡೆಗಳ ಉಪಸ್ಥಿತಿ ಬಯಸದ ಕೆಲವರು ಮಾತ್ರ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕ ಹಸೀಬ್ ಮುಘಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News