ಆರೋಪಿ ಬಂಧಿಸಲು ಹೋದ ಅರಣ್ಯ ಸಿಬ್ಬಂದಿಗೆ ಹಲ್ಲೆ
ಬೈಂದೂರು, ಸೆ.30: ಅಕ್ರಮವಾಗಿ ಬಂದೂಕು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಲು ಹೋದ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕೋಲಿನಿಂದ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ಸೆ.29ರಂದು ಬೆಳಗಿನ ಜಾವ ನಡೆದಿದೆ.
ಭಟ್ಕಳ ವಲಯ ಅರಣ್ಯ ಆಧಿಕಾರಿ ಸವಿತಾ ಆರ್.ದೇವಾಡಿಗ ಖಚಿತ ಮಾಹಿತಿಯಂತೆ ಸೆ.28ರಂದು ರಾತ್ರಿ ದಾಳಿ ನಡೆಸಿ ಭಟ್ಕಳ ಹೆಜ್ಜಿಲುವಿನ ಅಶೋಕ ಚಿಕ್ಕಯ್ಯ ಮರಾಠಿ ಎಂಬವರ ಮನೆಯಲ್ಲಿ ಬೇಟೆಗಾಗಿ ಇರಿಸಿ ಕೊಂಡಿದ್ದ ನಾಡ ಬಂದೂಕನ್ನು ವಶಪಡಿಸಿಕೊಂಡಿದ್ದರು.
ವಿಚಾರಣೆ ಸಂದರ್ಭ ಅಶೋಕ್ ಈ ಬಂದೂಕು ಶಿರೂರು ತೂದಳ್ಳಿಯ ನಂದರ ಗದ್ದೆಯ ವಿಲ್ಸೆಂಟ್ ಸೆಬಾಸ್ಟೀಯನ್ ನೀಡಿರುವುದಾಗಿ ತಿಳಿಸಿದ್ದನು. ಅದರಂತೆ ಸವಿತಾ ದೇವಾಡಿಗ ಸಿಬ್ಬಂದಿಯವರೊಂದಿಗೆ ವಿಲ್ಸೆಂಟ್ ಸೆಬಾಸ್ಟೀ ಯನ್‌ನನ್ನು ಬಂಧಿಸಲು ಮನೆಗೆ ಹೋದಾಗ ಆತನ ಸಹೋದರ ಸಂತೋಷ ಸೆಬಾಸ್ಟೀಯನ್ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ಮಲ್ಲಿಕಾರ್ಜುನ ಎಂಬವರ ಮೇಲೆ ಕೋಲಿನಿಂದ ಹಲ್ಲೆ ನಡೆಸಿ, ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.