ಕಾಶ್ಮೀರ ಮಹಿಳೆಯರ ಹೋರಾಟಕ್ಕೆ ವಿವಿಧ ದೇಶಗಳ ಹೋರಾಟಗಾರರ ಬೆಂಬಲ

Update: 2019-09-30 16:39 GMT

ನ್ಯೂಯಾರ್ಕ್, ಸೆ. 30: ಮಹಿಳಾವಾದಿಗಳು, ಮಹಿಳಾಹಕ್ಕುಗಳ ಕಾರ್ಯಕರ್ತರು, ಪ್ರಜಾಪ್ರಭುತ್ವ ಹೋರಾಟಗಾರರು, ವಕೀಲರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಸಾಹಿತಿಗಳು ಮತ್ತು ಪತ್ರಕರ್ತರು ಸೇರಿದಂತೆ ಜಗತ್ತಿನಾದ್ಯಂತದ 500 ವ್ಯಕ್ತಿಗಳು ಹಾಗೂ ವಿವಿಧ ಸಂಘಟನೆಗಳು ಕಾಶ್ಮೀರದ ಮಹಿಳೆಯರ ಪರವಾಗಿ ಧ್ವನಿಯೆತ್ತಿದ್ದಾರೆ.

ಜಂಟಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಈ ವ್ಯಕ್ತಿಗಳು ಮತ್ತು ಸಂಘಟನೆಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಜನರ ಚಲನವಲನಗಳ ಮೇಲೆ ಹೇರಲಾಗಿರುವ ನಿರ್ಬಂಧ ಮತ್ತು ಸಂಪರ್ಕ ಜಾಲಗಳಿಗೆ ಹೇರಲಾಗಿರುವ ತಡೆಯನ್ನು ತೆರವುಗೊಳಿಸುವಂತೆ ಭಾರತ ಸರಕಾರವನ್ನು ಒತ್ತಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಮಹಾಸಭೆಯ ವಾರ್ಷಿಕ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ಒಂದು ದಿನ ಮೊದಲು ಅವರು ಜಂಟಿ ಹೇಳಿಕೆ ಹೊರಡಿಸಿದ್ದಾರೆ.

ರವಿವಾರ ಟೆಕ್ಸಾಸ್‌ನ ಹ್ಯೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ತನ್ನ ಸರಕಾರ ತೆಗೆದುಕೊಂಡ ಕ್ರಮಗಳನ್ನು ಮೋದಿ ಸಮರ್ಥಿಸಿಕೊಂಡಿದ್ದರು ಹಾಗೂ ಪಾಕಿಸ್ತಾನವನ್ನು ಟೀಕಿಸಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಅನುಮೋದಿಸಿದ ಭಾರತೀಯ ಸಂಸದರಿಗೆ ಎದ್ದು ನಿಂತು ಚಪ್ಪಾಳೆ ತಟ್ಟುವಂತೆಯೂ ಅವರು ಹ್ಯೂಸ್ಟನ್‌ನ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ಸೇರಿದ ಭಾರೀ ಸಂಖ್ಯೆಯ ಪ್ರೇಕ್ಷಕರನ್ನು ಕೋರಿದ್ದರು.

ಹೋರಾಟಗಳ ಮುಂಚೂಣಿಯಲ್ಲಿ ಮಹಿಳೆಯರು

‘‘ಸ್ವಾತಂತ್ರ್ಯ, ನ್ಯಾಯ, ಸತ್ಯಕ್ಕಾಗಿ ಹಾಗೂ ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿರುವ ಮಾನವಹಕ್ಕು ಉಲ್ಲಂಘನೆಗಳು, ಅದರಲ್ಲೂ ಮುಖ್ಯವಾಗಿ ಲೈಂಗಿಕ ಹಿಂಸೆ ಮತ್ತು ಅಪಹರಣಗಳಿಗೆ ಉತ್ತರದಾಯಿತ್ವ ನಿಗದಿಪಡಿಸುವಂತೆ ಆಗ್ರಹಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹೋರಾಟಗಳ ಮುಂಚೂಣಿಯಲ್ಲಿ ಮಹಿಳೆಯರು ಇದ್ದಾರೆ’’ ಎಂದು 30ಕ್ಕೂ ಹೆಚ್ಚು ದೇಶಗಳ ಪ್ರಮುಖ ಮಹಿಳೆಯರು ಸಹಿ ಹಾಕಿರುವ ಹೇಳಿಕೆ ತಿಳಿಸಿದೆ.

‘‘ಇಂದು ನಿರಂಕುಶ, ಸೇನಾ ಮತ್ತು ಹಿಂಸೆಯ ಶಕ್ತಿಗಳನ್ನು ಪ್ರತಿಭಟಿಸುವ ಅವರ ಹೋರಾಟದಲ್ಲಿ ಜಗತ್ತಿನ ಮಹಿಳೆಯರು ಅವರೊಂದಿಗೆ ನಿಲ್ಲುತ್ತಾರೆ. ಹಾಲಿ ಆಕ್ರಮಣದಿಂದ ಹಿಂದೆ ಸರಿಯುವಂತೆ ಹಾಗೂ ಹಿಂಸೆ ಮತ್ತು ಸೇನಾಪಡೆಗಳ ನಿಯೋಜನೆಯನ್ನು ಕೊನೆಗೊಳಿಸುವಂತೆ ಮಹಿಳೆಯರು ಭಾರತ ಸರಕಾರವನ್ನು ಒತ್ತಾಯಿಸುತ್ತಾರೆ. ಹಿಂಸೆ ಮತ್ತು ಸೇನಾಪಡೆಗಳ ನಿಯೋಜನೆಯಿಂದ ಈ ವಿವಾದವನ್ನು ಬಗೆಹರಿಸಲು 1947ರಿಂದಲೂ ಸಾಧ್ಯವಾಗಿಲ್ಲ’’ ಎಂದು ಅವರು ಹೇಳಿದ್ದಾರೆ.

ಶಿಕ್ಷಣ ತಜ್ಞರಾದ ನಿವೇದಿತಾ ಮೆನನ್, ನಂದಿನಿ ಸುಂದರ್, ಕಲ್ಪನಾ ಕಣ್ಣಬೀರನ್ ಮತ್ತು ಮಾನವಹಕ್ಕುಗಳ ಹೋರಾಟಗಾರ್ತಿ ಮೀನಾ ಕಂದಸಾಮಿ ಮುಂತಾದ ವ್ಯಕ್ತಿಗಳು ಹಾಗೂ ಅರ್ಜಂಟ್ ಆ್ಯಕ್ಷನ್ ಫಂಡ್, ಗ್ಲೋಬಲ್ ಫಂಡ್ ಫಾರ್ ವಿಮೆನ್ ಮತ್ತು ಅವರ್ ಬಾಡೀಸ್ ಅವರ್‌ಸೆಲ್ವ್ಸ್ ಮುಂತಾದ ಸಂಘಟನೆಗಳು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News