×
Ad

ಮುಂದಿನ ವರ್ಷ ಶಾಲಾ ಪ್ರಾರಂಭಲ್ಲೇ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸೈಕಲ್ ಒದಗಿಸುವ ಗುರಿ: ಸಚಿವ ಸುರೇಶ್ ಕುಮಾರ್

Update: 2019-09-30 22:39 IST

ಬಂಟ್ವಾಳ, ಸೆ. 30: ಮುಂದಿನ ವರ್ಷ ಶಾಲಾ ಪ್ರಾರಂಭದ ದಿನಗಳಲ್ಲೇ ಎಲ್ಲ ಮಕ್ಕಳಿಗೂ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸೈಕಲ್ ಒದಗಿಸುವುದು ಸರಕಾರದ ಗುರಿಯಾಗಿದ್ದು, ಈ ಕಾರ್ಯ ಪ್ರಕ್ರಿಯೆಯಲ್ಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

ಅವರು ಸೋಮವಾರ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್‍ನ ದತ್ತು ಯೋಜನೆಯಡಿ ನಿರ್ಮಾಣಗೊಂಡ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಪ್ರಗತಿಯನ್ನು ವೀಕ್ಷಿಸಿ, ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಡ್ಡಲಕಾಡಿಗೆ ಪ್ರೌಢಶಾಲಾ ಮಂಜೂರು

ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್, ಶಾಲೆಯ ಎಲ್ಲ ಮಕ್ಕಳಿಗೂ ಪಠ್ಯಪುಸ್ತಕವನ್ನು ಸಕಾಲದಲ್ಲಿ ಒದಗಿಸುವಂತೆ ಹಾಗೂ ಹೈಸ್ಕೂಲ್ ಮಂಜೂರು ಮಾಡುವಂತೆ ಕೋರಿದರು.

ದಡ್ಡಲಕಾಡು ಶಾಲೆ ರಾಜ್ಯಕ್ಕೇ ಮಾದರಿಯಾಗಿದ್ದು, ಪೋಷಕರು, ಗ್ರಾಮಸ್ಥರು ನಮ್ಮ ಶಾಲೆ ಎಂದು ಭಾವಿಸಿ ಒಂದಾದರೆ ಸರಕಾರಿ ಶಾಲೆಗಳು ಪ್ರಗತಿಯಾಗುತ್ತದೆ ಎಂದವರು, ಇಲಾಖೆಯಿಂದ ಮಾಹಿತಿ ಸಂಗ್ರಹಿಸಿ ಆಧ್ಯತೆ ಮೇರೆಗೆ ದಡ್ಡಲಕಾಡಿಗೆ ಪ್ರೌಢಶಾಲಾ ಮಂಜೂರು ಮಾಡುವು ದಾಗಿ ಈ ಸಂದರ್ಭ ಸಚಿವರು ಘೋಷಿಸಿದರು.

ಪಠ್ಯ ಪುಸ್ತಕ ಪೂರೈಕೆ ವಿಳಂಬವಾಗುತ್ತಿದ್ದು, ಮುಂದಿನ ವರ್ಷ ಶಾಲಾ ಪ್ರಾರಂಭದ ದಿನಗಳಲ್ಲೇ ಎಲ್ಲ ಮಕ್ಕಳಿಗೂ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸೈಕಲ್ ಒದಗಿಸಲಾಗುವುದು ಭರವಸೆ ನೀಡಿದರು.

ಬಂಟ್ವಾಳ ಶಾಸಕ ರಾಜೇಶ್ ಯು. ನಾಯ್ಕ್, ಜಿಲ್ಲಾ ಪಂಚಾಯತ್ ಸದಸ್ಯ ಎಂ.ತುಂಗಪ್ಪ ಬಂಗೇರ, ತಾಪಂ ಸದಸ್ಯ ಪ್ರಭಾಕರ ಪ್ರಭು, ತಹಸೀಲ್ದಾರ್ ರಶ್ಮಿ ಎಸ್.ಆರ್, ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಯೋಗೀಶ್, ಪ್ರಭಾರ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಜ್ಞಾನೇಶ್, ಟಿಸಿಎಚ್ ಪ್ರಿನ್ಸಿಪಾಲ್ ಮತ್ತು ಸಹನಿರ್ದೇಶಕಿ ಶಾರದಾ, ಜಿಲ್ಲಾ ಅಕ್ಷರ ದಾಸೋಹ ನಿರ್ದೇಶಕಿ ರಾಜಲಕ್ಷ್ಮೀ, ಕ್ಷೇತ್ರ ಸಂಪನ್ಮೂಲ ಕೇಂದ್ರ ಅಧಿಕಾರಿ ರಾಧಾಕೃಷ್ಣ ಭಟ್, ಅಕ್ಷರ ದಾಸೋಹದ ನೋಡಲ್ ಅಧಿಕಾರಿ ನೋಣಯ್ಯ, ಎಸ್‍ಡಿಎಂಸಿ ಅಧ್ಯಕ್ಷ ರಾಮಚಂದ್ರ ಕರೆಂಕಿ, ಬಿಇಒ ಲೋಕೇಶ್, ಗ್ರಾಪಂ ಸದಸ್ಯರಾದ ಪೂವಪ್ಪ ಮೆಂಡನ್, ರಾಜಶ್ರೀ, ಸಂಜೀವ ಮೆಂಡನ್, ಸ್ಥಳೀಯ ನಾಯಕಿ ಸುಲೋಚನಾ ಭಟ್ ಹಾಜರಿದ್ದರು.

ಸಹಶಿಕ್ಷಕಿ ಹಿಲ್ಡಾ ಫರ್ನಾಂಡೀಸ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜ ವಂದಿಸಿದರು. ಇದೇ ವೇಳೆ ಶಾಲೆಯಲ್ಲಿ ಮಕ್ಕಳೊಂದಿಗೆ ಬೆರೆತ ಸಚಿವರು, ಅವರ ಆಟಪಾಠಗಳ ಕುರಿತು ಪ್ರಶ್ನೆ ಕೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News