ವಿಟ್ಲ ಪಡ್ನೂರು ಗ್ರಾಪಂಗೆ ಗಾಂಧಿ ಗ್ರಾಮದ ಗರಿ
ವಿಟ್ಲ, ಸೆ. 30: ವಿವಿಧ ಮಾನದಂಡಗಳ ಆಧಾರದಲ್ಲಿ ರಾಜ್ಯದಲ್ಲಿ ಅತ್ಯುತ್ತಮ ಉತ್ತಮ ಸಾಧನೆ ಮಾಡಿರುವ ಗ್ರಾಮ ಪಂಚಾಯತ್‍ಗಳಿಗೆ ಪ್ರತಿವರ್ಷ ನೀಡುವ "ಗಾಂಧಿ ಗ್ರಾಮ ಪುರಸ್ಕಾರಕ್ಕೆ" ಬಂಟ್ವಾಳ ತಾಲೂಕಿನ ವಿಟ್ಲ ಪಡ್ನೂರು ಪಂಚಾಯತ್ ಆಯ್ಕೆಯಾಗಿದೆ. ದ.ಕ. ಜಿಲ್ಲೆಯಿಂದ ಆಯ್ಕೆಯಾದ ಐದು ಗ್ರಾಮ ಪಂಚಾಯತ್‍ಗಳ ವಿಟ್ಲ ಪಡ್ನೂರು ಗ್ರಾಪಂ ಒಂದಾಗಿದೆ.
ಗ್ರಾಪಂ ವ್ಯಾಪ್ತಿಯ ಕುಟುಂಬಗಳಿಗೆ ಶೌಚಾಲಯ, ಶಾಲೆ, ಅಂಗನವಾಡಿಗಳಲ್ಲಿ ಶೌಚಾಲಯ ಹಾಗೂ ಗ್ರಾಪಂ ವ್ಯಾಪ್ತಿಯಲ್ಲಿನ ಸ್ವಚ್ಛತೆ, ಅನುದಾನಗಳ ಸದ್ಬಳಕೆ, ಸಮರ್ಪಕ ತೆರಿಗೆ ಸಂಗ್ರಹ ಇತ್ಯಾದಿಗಳನ್ನು ಆಧರಿಸಿ ಈ ಪುರಸ್ಕಾರವನ್ನು ನೀಡಲಾಗುತ್ತಿದೆ. ಪ್ರತಿ ಪಂಚಾಯತ್ ಗಳು ತಮ್ಮ ಪ್ರಗತಿಗೆ ಸಂಬಂಧಿಸಿದ 150 ಅಂಕಗಳ ಪ್ರಶ್ನೆಗಳಿಗೆ ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಪಂ 117 ಅಂಕಗಳನ್ನು ಪಡೆದು ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಜನರ ಬೇಡಿಕೆಗಳ ಈಡೇರಿಕೆ, ಸರಕಾರದ ಯೋಜನೆಗಳು ವಿಟ್ಲ ಪಡ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಸದ್ಬಳಕೆಯಾಗಿದೆ. ವಿಟ್ಲ-ಸಾಲೆತ್ತೂರು-ಮಂಗಳೂರು ರಸ್ತೆಯ ಕೊಡಂಗಾಯಿ ಎಂಬಲ್ಲಿ ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಕಚೇರಿಯಿದ್ದು, ಆರು ಸಾವಿರಕ್ಕಿಂತಲೂ ಅಧಿಕ ಜನರು ವಾಸ ಮಾಡುತ್ತಿದ್ದಾರೆ. ಸುಸಜ್ಜಿತ ಕಟ್ಟಡ, 65 ಸೆನ್ಸ್ ಜಾಗದಲ್ಲಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಕಚೇರಿ ಸುತ್ತಲೂ ಹಚ್ಚು ಹಸಿರಿನಿಂದ ಕೂಡಿದ ತೆಂಗಿನ ಮರ ಕಚೇರಿಗೆ ಬರುವವರಿಗೆ ತಂಪು ಒದಗಿಸುತ್ತದೆ.
ಶೇ.96ರಷ್ಟು ತೆರಿಗೆ ಸಂಗ್ರಹ:
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳು ಜಾರಿಗೊಂಡಿದ್ದು, ಗ್ರಾಮಸ್ಥರಿಗೆ ತಲುಪಿಸುವಲ್ಲಿ ಪಂಚಾಯಿತಿ ಯಶಸ್ವಿಯಾಗಿದೆ. ತೆರಿಗೆ ಸಂಗ್ರಹ, ತೆರಿಗೆ ಪರಿಷ್ಕರಣೆ, ಸ್ವಚ್ಛತೆ ಬಗ್ಗೆ ವಿಶೇಷ ಗಮನಹರಿಸಲಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಅಲ್ಲಲ್ಲಿ ನಾಮಫಲಕ ಅಳವಡಿಸಲಾಗಿದೆ. ಪ್ಲಾಸ್ಟಿಕ್ ನಿಷೇಧ, ಸ್ವಚ್ಛತೆ ಬಗ್ಗೆಗಿನ ನಿರ್ದೇಶನ ಪಾಲಿಸಲಾಗಿದೆ. ಶೇ.96ರಷ್ಟು ತೆರಿಗೆ ಸಂಗ್ರಹಿಸಲಾಗಿದೆ. ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಪಂಚಾಯತ್ ವ್ಯಾಪ್ತಿಯ ಶಾಲೆಗಳಿಗೆ ಆವರಣಗೋಡೆ ನಿರ್ಮಾಣ, ಶೌಚಾಲಯ, ಬೇಸಿಗೆ ಕಾಲದಲ್ಲಿ ಹೊಳೆಗಳಿಗೆ ಅಣೆಕಟ್ಟು ನಿರ್ಮಿಸಿ ನೀರಿನ ಬಳಕೆ ಬಗ್ಗೆ ಜನರಿಗೆ ಉತ್ತೇಜನ ನೀಡಲಾಗುತ್ತಿದೆ. ಮಳೆಕೊಯ್ಲು ಮೂಲಕ ನೀರಿನ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ.
ಪರಿಶಿಷ್ಟ ವರ್ಗ ಹಾಗೂ ಪಂಗಡದ ನಿಧಿ ಬಳಕೆ, ಬಡವರಿಗೆ ಹಕ್ಕುಪತ್ರ, 3.80 ಎಕರೆ ಗ್ರಾಮ ಪಂಚಾಯತ್ ಜಾಗದಲ್ಲಿ ನಿವೇಶನ ಇಲ್ಲದ 77 ಕುಟುಂಬಕ್ಕೆ ನಿವೇಶನ ಹಂಚಿಕೆ ಮಾಡಲಾಗಿದೆ. ವಸತಿ ನಿರ್ಮಿಸಿ ಕೊಡುವಲ್ಲಿ ಯಶಸ್ಸು ಸಾಧಿಸಿದೆ. ಗ್ರಾಮದ ಪ್ರತಿಯೊಬ್ಬರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿದ್ದಾರೆ. ನಮ್ಮ ಗ್ರಾಮ ನಮ್ಮ ಯೋಜನೆ ಕ್ರೀಯಾಯೋಜನೆ ತಯಾರಿಸಲಾಗಿದೆ. ವಾರ್ಡ್ ಸಭೆ, ಗ್ರಾಮ ಸಭೆ, ಸ್ಥಾಯಿ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಸಭೆಗಳನ್ನು ಸಮಯಕ್ಕೆ ಸರಿಯಾಗಿ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಹಲವು ಅಭಿವೃದ್ಧಿ ಕಾರ್ಯ ನಡೆದಿದೆ. ಈ ಭಾಗದಲ್ಲಿ 11 ಅಂಗನವಾಡಿ ಕೇಂದ್ರ, 4 ಶಾಲೆಗಳಿದ್ದು, ಪಂಚಾಯತ್ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಕಡತ ನಿರ್ವಹಣೆ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಿಗೆ ಇನ್ನಷ್ಟು ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲು ಮನವಿ ಸಲ್ಲಿಸಲಾಗಿದೆ. ಇದೀಗ ಪ್ರಶಸ್ತಿ ಬಂದಿದ್ದರಿಂದ ಗ್ರಾಮಸ್ಥರು ಪಂಚಾಯತ್ ಆಡಳಿತ ವರ್ಗ ಸಂತಸ ವ್ಯಕ್ತಪಡಿಸಿದೆ.
ಈ ಪ್ರಶಸ್ತಿಗೆ ಸರ್ವ ಪಕ್ಷದ ಪಂಚಾಯತ್ ಸದಸ್ಯರ, ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಸಿಬ್ಬಂದಿ ಸಹಕಾರ ಮುಖ್ಯ ಕಾರಣ. ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಲಾಗಿದೆ. ಪ್ರಶಸ್ತಿ ಬಂದಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲು ನಮಗೆ ಉತ್ತೇಜನ ನೀಡಿದಂತಾಗಿದೆ.
- ರವೀಶ್ ಶೆಟ್ಟಿ ಅಧ್ಯಕ್ಷರು, ವಿಟ್ಲ ಪಡ್ನೂರು ಗ್ರಾಪಂ
ಈ ಪ್ರಶಸ್ತಿ ಬಂದಿದ್ದು, ನಮಗೆಲ್ಲ ತುಂಬ ಸಂತೋಷ ತಂದಿದೆ. ಸರ್ವಪಕ್ಷದ ಸದಸ್ಯರ ಒಗ್ಗಟ್ಟಿನ ಕೆಲಸದಿಂದ ಅಭಿವೃದ್ಧಿ ಸಾಧಿಸಿದೆ. ತೆರಿಗೆ ಸಂಗ್ರಹ, ತೆರಿಗೆ ಪರಿಷ್ಕರಣೆ ಯಶಸ್ವಿಯಾಗಿ ನಿಭಾಯಿಸಲಾಗಿದೆ. ಅಧ್ಯಕ್ಷರ, ಸರ್ವ ಸದಸ್ಯರ, ಕ್ಷೇತ್ರದ ಶಾಸಕರ ಸಹಕಾರ ಸಿಗುತ್ತಿದೆ.
- ಸುಜಯ ಕೆ., ಅಭಿವೃದ್ಧಿ ಅಧಿಕಾರಿ , ವಿಟ್ಲ ಪಡ್ನೂರು ಗ್ರಾಪಂ