ಅಕ್ರಮ ನಾಡಬಂದೂಕು ವಶಪಡಿಕೊಳ್ಳಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ಆರೋಪ; ಇಬ್ಬರ ಬಂಧನ
ಭಟ್ಕಳ: ತಾಲ್ಲೂಕಿನ ಕೆಕ್ಕೋಡ್ ಗ್ರಾಮದ ಹೆಜ್ಜಿಲನಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ನಾಡಬಂದೂಕನ್ನು ವಶಪಡಿಸಿಕೊಳ್ಳಲು ಶನಿವಾರ ರಾತ್ರಿ ಹೋಗಿದ್ದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂದೂಕು ಸಮೇತ ಬಂಧಿಸಲಾಗಿದೆ.
ಕೆಕ್ಕೋಡ್ ನಿವಾಸಿ ಅಶೋಕ ಚಿಕ್ಕಯ್ಯ ಮರಾಠಿ (39), ಬೈಂದೂರು ತೂದಳ್ಳಿ ನಂದರಗದ್ದೆಯ ವಿಲ್ಸೆಂಟ್ ಸೆಬಾಸ್ಟಿನ್ (40) ಬಂಧಿತ ಆರೋಪಿಗಳು.
ಕೆಕ್ಕೋಡ್ ನಿವಾಸಿ ರಾಜು ಮರಾಠಿ ಮನೆ ಮೇಲೆ ದಾಳಿ ನಡೆಸಿ, ಪರವಾನಗಿ ಇಲ್ಲದ ನಾಡ ಬಂದೂಕನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ, ಬಂದೂಕು ಬೈಂದೂರು ತೂದಳ್ಳಿ ನಂದರಗದ್ದೆಯ ವಿಲ್ಸಂಟ್ ಸೆಬಾಸ್ಟಿನ್ ಎಂಬುವರಿಗೆ ಸೇರಿದ್ದೆಂದು ತಿಳಿದುಬಂದಿದೆ. ನಂತರ ಬೈಂದೂರು ಅರಣ್ಯಾಧಿಕಾರಿಗಳೊಂದಿಗೆ, ಅರೋಪಿ ಸೆಬಾಸ್ಟಿನ್ ಮನೆಗೆ ಬಂಧನಕ್ಕೆ ತೆರಳಿದಾಗ ಆರೋಪಿಯ ಅಣ್ಣ ಸಂತೋಷ ಸೆಬಾಸ್ಟಿನ್ ಬೈಂದೂರು ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಅರೋಪಿ ವಿಲ್ಸೆಂಟನ್ನು ಬಂಧಿಸಿ, ವನ್ಯಜೀವಿ ಸಂರಕ್ಷಣೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂತೋಷ ಸೆಬಾಸ್ಟಿನ್ ವಿರುದ್ಧ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಬೈಂದೂರು ಠಾಣೆಯಲ್ಲಿ ದೂರು ನೀಡಿದ್ದಾರೆ.