ಶತಮಾನೋತ್ತರ ಬೆಳ್ಳಿಹಬ್ಬ: ಕಲ್ಲಡ್ಕ ಹಿ.ಪ್ರಾ. ಶಾಲೆಯಲ್ಲಿ 'ಪ್ಲೇ ಏರಿಯಾ'
ಬಂಟ್ವಾಳ, ಅ. 1: ಪ್ರಸ್ತುತ ಶತಮಾನೋತ್ತರ ಬೆಳ್ಳಿಹಬ್ಬ (125 ವರ್ಷಗಳು)ದ ಸಂಭ್ರಮದಲ್ಲಿರುವ ಕಲ್ಲಡ್ಕ ದ.ಕ.ಜಿ.ಪಂ.ಮಾದರಿ ಹಿ.ಪ್ರಾ. ಶಾಲೆಯಲ್ಲಿ ಪ್ಲೇ ಏರಿಯಾವನ್ನು ಅನುಷ್ಠಾನಿಸುವ ಮೂಲಕ ವಿದ್ಯಾರ್ಥಿಗಳನ್ನು ಆಕರ್ಷಿಸುವುದಕ್ಕೆ ಮುಂದಾಗಿದೆ.
ಶಾಲೆಯ ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿ ಹಾಗೂ ಎಂಆರ್‍ಪಿಎಲ್ ಸಹಯೋಗದಲ್ಲಿ ಸುಮಾರು 6 ಲಕ್ಷ ರೂ.ಗಳ ವೆಚ್ಚದಲ್ಲಿ ಈ ಪ್ಲೇ ಏರಿಯಾ ವನ್ನು ಬಿ.ಸಿ.ರೋಡಿನ ಉದ್ಯಮಿ ಸಂದೀಪ್ ಶೆಟ್ಟಿ ಮಂಗಳವಾರ ಉದ್ಘಾಟಿಸಿದರು. ಹಿರಿಯ ವಿದ್ಯಾರ್ಥಿ, ಉದ್ಯಮಿ ಶುಕೂರ್ ಸಾಹೇಬ್ ಚಿಣ್ಣರ ಪ್ಲೇ ರೂಂ ಅನ್ನು ಉದ್ಘಾಟಿಸಿದರು.
ಶಾಲೆಯ ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮಾತನಾಡಿದರು. ಉದ್ಯಮಿಗಳಾದ ರಾಜೀವ್ ಎಸ್. ನಾಯ್ಕ್, ಲಲಿತಾ ಎಸ್.ರಾವ್, ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ, ಗ್ರಾಮಪಂಚಾಯತ್ ಸದಸ್ಯರಾದ ಲಖಿತಾ ಆರ್ ಶೆಟ್ಟಿ, ಲತಾ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಡಾ ಸುರೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯರದ ಅಬೂಬಕರ್ ಅಶ್ರಫ್ ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು.
2.97 ಲಕ್ಷ ರೂ. ವೆಚ್ಚದಲ್ಲಿ ಪ್ಲೇ ಏರಿಯಾ:
ಪ್ಲೇ ಏರಿಯಾವು ಸುಮಾರು 11x13 ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಎಲ್‍ಕೆಜಿಯಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಆಡುವುದಕ್ಕೆ ಉಯ್ಯಾಲೆ, ಜಾರುಬಂಡಿ, ಕ್ಲೈಂಬರ್ ಮೊದಲಾದ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಪ್ಲೇ ರೂಮ್‍ನಲ್ಲಿ ನೆಲಕ್ಕೆ ಮ್ಯಾಟ್‍ನ ಜೊತೆಗೆ ಸಣ್ಣಪುಟ್ಟ ಮಕ್ಕಳು ಆಡುವ ಪರಿಕರಗಳಿರುತ್ತವೆ. ಎಂಆರ್‍ಪಿಎಲ್ ಸಂಸ್ಥೆಯು 2.97 ಲಕ್ಷ ರೂ.ಗಳ ವೆಚ್ಚದಲ್ಲಿ ಪ್ಲೇ ಏರಿಯಾದ ಪೂರ್ತಿ ಪರಿಕರಗಳನ್ನು ಒದಗಿಸಿದ್ದು, ಉಳಿದಂತೆ ಏರಿಯಾಕ್ಕೆ ಸುರಕ್ಷತಾ ತಡೆಬೇಲಿ, ಇಂಟರ್‍ಲಾಕ್ ಸೌಲಭ್ಯ ಹಾಗೂ ಅನುಷ್ಠಾನಕ್ಕೆ ಅನುದಾನವನ್ನು ಶಾಲಾ ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿಯು ಭರಿಸಿದೆ.
10 ನೂತನ ಕೊಠಡಿಗಳ ನಿರ್ಮಾಣ
ಸುಮಾರು 125 ವರ್ಷಗಳ ಹಳೆಯದಾದ ಕಲ್ಲಡ್ಕ ಶಾಲೆಯಲ್ಲಿ ಈ ವರ್ಷ ಎಲ್‍ಕೆಜಿಯಿಂದ 8ನೇ ತರಗತಿವರೆಗೆ 307 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ವರ್ಷ ಒಂದನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಅನುಮತಿಯೂ ದೊರಕಿದೆ. ಶಾಲೆಯ ಹಳೆಯ ಕಟ್ಟಡವನ್ನು ಕೆಡವಲು ಇಲಾಖೆಯು ಅನುಮತಿ ನೀಡಿದ್ದು, ಅದೇ ಸ್ಥಳದಲ್ಲಿ ಎಂಆರ್‍ಪಿಎಲ್‍ನ 64 ಲಕ್ಷ ರೂ.ಗಳ ಅನುದಾನದಲ್ಲಿ 10 ಕೊಠಡಿಗಳ ನಿರ್ಮಾಣಕ್ಕೆ ಈಗಾಗಲೇ ಸಂಸದ ನಳಿನ್‍ಕುಮಾರ್ ಕಟೀಲು ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹಳೆಯ ಕಟ್ಟಡವನ್ನು ಕೆಡಹುವ ಉದ್ದೇಶದಿಂದಲೇ ಕೆಲವು ಸಮಯಗಳ ಹಿಂದೆ ಸುಮಾರು 17.30 ಲಕ್ಷ ರೂ.ಗಳ ವೆಚ್ಚದಲ್ಲಿ ಮೂರು ಕೊಠಡಿಗಳು ನಿರ್ಮಾಣಗೊಂಡಿದ್ದು, ಈ ಕೊಠಡಿಗಳಿಗೆ ತರಗತಿಗಳನ್ನು ಸ್ಥಳಾಂತರಗೊಳಿಸಿ, ಬಳಿಕ ಹೊಸ ಕಟ್ಟಡದ ಕಾಮಗಾರಿ ನಡೆಯಲಿದೆ. ಅನುದಾನಕ್ಕೆ ಮುಂದಿನ ಒಂದು ವಾರದೊಳಗೆ ಎಂಆರ್‍ಪಿಎಲ್‍ನಿಂದ ಅನುಮತಿ ದೊರೆಯಲಿದೆ ಎಂದು ಶಾಲೆಯ ಮೂಲಗಳು ತಿಳಿಸಿವೆ.
ಎಂಆರ್‍ಪಿಎಲ್ ದೊಡ್ಡ ಮೊತ್ತದ ಅನುದಾನ
ಶಾಲೆಯ ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿಯ ವತಿಯಿಂದ ಈ ಬಾರಿ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು, ಎಂಆರ್‍ಪಿಎಲ್‍ನ ಸಹಯೋಗದೊಂದಿಗೆ ಪ್ರಸ್ತುತ 6 ಲಕ್ಷ ರೂ.ಗಳ ವೆಚ್ಚದಲ್ಲಿ ಪ್ಲೇ ಏರಿಯಾ ಅನುಷ್ಠಾನಗೊಳ್ಳುತ್ತಿದೆ. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಇದು ಅನುಕೂಲವಾಗಿದೆ. ಜೊತೆಗೆ ಶಾಲೆಗೆ 10 ಕೊಠಡಿಗಳ ನಿರ್ಮಾಣಕ್ಕೂ ಎಂಆರ್‍ಪಿಎಲ್ ದೊಡ್ಡ ಮೊತ್ತದ ಅನುದಾನ ನೀಡಿದೆ.
-ಅಬೂಬಕರ್ ಅಶ್ರಫ್
ಮುಖ್ಯ ಶಿಕ್ಷಕರು, ಕಲ್ಲಡ್ಕ ಶಾಲೆ