ಅಕ್ರಮ ಜಾನುವಾರು ಸಾಗಾಟ : ಆರೋಪಿ ಸೆರೆ
Update: 2019-10-01 22:57 IST
ಉಪ್ಪಿನಂಗಡಿ: ನೆಲ್ಯಾಡಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಅಕ್ರಮ ಜಾನುವಾರು ಸಾಗಾಟ ಆರೋಪದಲ್ಲಿ ಉಪ್ಪಿನಂಗಡಿ ಪೊಲೀಸರು ಲಾರಿ ಸಹಿತ 29 ಜಾನುವಾರು ಮತ್ತು ಆರೋಪಿಯೋರ್ವನನ್ನು ಬಂಧಿಸಿದ್ದಾರೆ.
ಹಾಸನ ಕಡೆಯಿಂದ ಮಂಗಳೂರು ಕಡೆಗೆ ಲಾರಿಯೊಂದರಲ್ಲಿ ಜಾನುವಾರು ಸಾಗಾಟ ನಡೆಯುತ್ತಿದೆ ಎಂದು ಬಂದ ಮಾಹಿತಿ ಮೇರೆಗೆ ನೆಲ್ಯಾಡಿ ಹೊರ ಠಾಣೆಯ ಎ.ಎಸ್.ಐ. ಸೀತಾರಾಮ ಮತ್ತು ತಂಡ ನೆಲ್ಯಾಡಿ ಬೆಥನಿ ಕಾಲೇಜು ಬಳಿ ಲಾರಿಯನ್ನು ತಡೆದು ಲಾರಿಯಲ್ಲಿದ್ದ 28 ಎಮ್ಮೆ ಕರು ಮತ್ತು 1 ಹೋರಿ ಸೇರಿದಂತೆ ಒಟ್ಟು 29 ಜಾನುವಾರು ವಶಕ್ಕೆ ತೆಗೆದುಕೊಂಡಿದ್ದಾರೆ.
ಚಾಲಕ ಸೆರೆ, 3 ಮಂದಿ ಪರಾರಿ
ಲಾರಿಯಲ್ಲಿದ್ದ ಚಾಲಕ ಅರಸೀಕೆರೆಯ ಇಮ್ರಾನ್ ಪಾಶಾ ಎಂಬಾತ ಪೊಲೀಸ್ ವಶವಾಗಿದ್ದು, ಲಾರಿಯಲ್ಲಿದ್ದ ಇತರ 3 ಮಂದಿ ಲಾರಿಯಿಂದ ಜಿಗಿದು ಓಡಿ ಪರಾರಿ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ತೆ ಕಾರ್ಯಾಚರಣೆಯಲ್ಲಿ ಎ.ಎಸ್.ಐ. ಸೀತಾರಾಮ ಅವರೊಂದಿಗೆ ಪೊಲೀಸ್ ಸಿಬ್ಬಂದಿಗಳಾದ ಪ್ರಶಾಂತ್ ಮತ್ತು ಪ್ರತಾಪ್ ಭಾಗವಹಿಸಿದ್ದರು.