ಫ್ಯಾಸಿಸ್ಟ್ ನೀತಿಗಳಿಂದಾಗಿ ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಎಂ.ಕೆ.ಫೈಝಿ

Update: 2019-10-02 14:45 GMT

ರಿಯಾದ್: ಇಂಡಿಯನ್ ಸೋಷಿಯಲ್ ಫೋರಂ ರಿಯಾದ್ ಕೇಂದ್ರ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ.ಫೈಝಿಯವರು ಭಾರತವು ಇಂದು ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರುಸುತ್ತಿದ್ದು, ಕೇಂದ್ರ ಸರಕಾರದ ದ್ವಂದ್ವ ನೀತಿಗಳು ನಾಗರಿಕರ ಜೀವನವನ್ನು ಅಪಾಯಕ್ಕೆ ದೂಡುತ್ತಿದ್ದು ಇದರ ವಿರುದ್ಧ ಸಂಘಟಿತ ಹೋರಾಟದ ಅಗತ್ಯ ಇದೆ ಎಂದು ಹೇಳಿದರು.

ಮೋದಿ ಸರ್ಕಾರದ ಎರಡನೆಯ ಅವಧಿಯಲ್ಲಿ ಅಂಗೀಕರಿಸಿದ ಹೆಚ್ಚಿನ ಮಸೂದೆಗಳು ಮುಸ್ಲಿಮರನ್ನು ಗುರಿಯಾಗಿಸಿವೆ ಮತ್ತು ಹಿಂದೂ ರಾಷ್ಟ್ರ ಎಂಬ ಆರೆಸ್ಸೆಸ್ ದೀರ್ಘಕಾಲದ ಕನಸನ್ನು ನನಸು ಮಾಡುವ ಪ್ರಯತ್ನದಲ್ಲಿದೆ ಎಂದು ಅವರು ಟೀಕಿಸಿದರು. ದೇಶದ ಉತ್ಪಾದನಾ ವಲಯವು ಕ್ಷೀಣಿಸುತ್ತಿದ್ದು ಜನ ಸಾಮಾನ್ಯರ ಮೇಲೆ ಅನಗತ್ಯ ಒತ್ತಡ ಹೇರುತ್ತಿದ್ದು ಕೇಂದ್ರ ಸರಕಾರ ಮಾತ್ರ ಕಾರ್ಪೊರೇಟ್ ಸಂಸ್ಥೆಗಳ ಅಧೀನದಲ್ಲಿರುವಂತೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ. ಸರಕಾರವು ತನ್ನ  ಆರ್ಥಿಕ ನೀತಿಗಳನ್ನು ಸರಿಪಡಿಸದಿದ್ದಲ್ಲಿ ದೇಶವು ಮುಂದೆ ದಿವಾಳಿಯ ಹಂತಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ಇಂಡಿಯನ್ ಸೋಷಿಯಲ್‌ ಪೋರಂ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ರಶೀದ್ ಖಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಕೇರಳ, ತಮಿಳುನಾಡು, ಕರ್ನಾಟಕ ರಾಜ್ಯ ಸಮಿತಿಗಳು ಮತ್ತು ಅಲ್ ಖರ್ಜ್, ಬುರೈದಾ ಘಟಕಗಳು ಇದೇ ಸಂಧರ್ಭದಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ.ಫೈಝಿಯವರಿಗೆ ಸಹ ಸನ್ಮಾನವನ್ನು ಆಯೋಜಿಸಿದ್ದವು. ಕೇರಳ ರಾಜ್ಯ ಅಧ್ಯಕ್ಷರಾದ ನೂರುದ್ದೀನ್ ತಿರೂರ್, ಪ್ರಧಾನ ಕಾರ್ಯದರ್ಶಿ ಅನ್ಸಾರ್ ಚಂಗನಸ್ಸೆರಿ, ಕರ್ನಾಟಕ ರಾಜ್ಯ ಅಧ್ಯಕ್ಷರಾದ ಸಾಬಿತ್ ಹಸನ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್, ತಮಿಳುನಾಡು ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಅಲಿ ಬಾಬು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಫತರುದ್ದೀನ್ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News