×
Ad

ಕಾರವಾರ: ಕೊಂಕಣ ರೈಲಿನಲ್ಲಿ 6 ಕೆ.ಜಿ.ಗಾಂಜಾ ವಶ

Update: 2019-10-02 21:43 IST

ಉಡುಪಿ, ಅ.2: ಮುಂಬೈ ಸಿಎಸ್‌ಟಿಯಿಂದ ಮಂಗಳೂರಿಗೆ ತೆರಳುತಿದ್ದ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಕಾರವಾರ ರೈಲು ನಿಲ್ದಾಣ ತಲುಪಿದಾಗ ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿಯೊಬ್ಬರು ರೈಲಿನ ತಪಾಸಣೆ ನಡೆಸುವ ಸಂದರ್ಭ ವಾರಸುದಾರರಿಲ್ಲದ ಬ್ಯಾಗೊಂದರಲ್ಲಿ ಆರು ಕೆ.ಜಿ. ಗಾಂಜಾ ಪತ್ತೆಯಾದ ಘಟನೆ ನಡೆದಿದೆ.

ಕರ್ತವ್ಯದಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿ ಸಿ.ಟಿ.ಸಜೀರ್ ಅವರು ಜನರಲ್ ಕೋಚ್ ತಪಾಸಣೆ ನಡೆಸುತಿದ್ದಾಗ, ಮೇಲಿನ ಸಾಮಾನಿಡುವ ರ್ಯಾಕ್‌ನಲ್ಲಿ ಸೈನ್ಯದ ಸಮವಸ್ತ್ರದ ಮಾದರಿಯಲ್ಲಿದ್ದ ಬೆನ್ನಿಗೆ ಹಾಕುವ ಚೀಲವೊಂದು ಅನುಮಾನಾಸ್ಪದವಾಗಿ ಕಂಡುಬಂದಿತ್ತು. ಇದರ ಕುರಿತು ಪ್ರಶ್ನಿಸಿದಾಗ ಯಾರೂ ವಾರಸುದಾರರು ಮುಂದೆ ಬರಲಿಲ್ಲ. ಬ್ಯಾಗ್‌ನ್ನು ಅವರು ತೆರೆದಾಗ ಅದರಲ್ಲಿ ಕಂದು ಟೇಪ್‌ನಿಂದ ಸುತ್ತಿದ ದೊಡ್ಡ ಪ್ಯಾಕೆಟ್ ಕಂಡುಬಂತು.

ಕೂಡಲೇ ಅವರು ಅನುಮಾನದಿಂದ ತನ್ನ ಸಹೋದ್ಯೋಗಿಗಳಿಗೆ ಹಾಗೂ ಕಾರವಾರದ ಪೊಲೀಸರಿಗೆ ಮಾಹಿತಿ ನೀಡಿದರು. ರೈಲು ನಿಲ್ದಾಣಕ್ಕೆ ಧಾವಿಸಿ ಬಂದ ಪೊಲೀಸರು ಇಬ್ಬರು ಸ್ವತಂತ್ರ ಸಾಕ್ಷಿಗಳ ಸಮ್ಮುಖದಲ್ಲಿ ಪ್ಯಾಕೆಟ್‌ನ್ನು ತೆರೆದಾಗ ಅದರಲ್ಲಿ ಗಾಂಜಾ ಕಂಡು ಬಂತು. ಕೂಡಲೇ ಇಲೆಕ್ಟ್ರಾನಿಕ್ಸ್ ತೂಕಯಂತ್ರವನ್ನು ತರಿಸಿ ಪರೀಕ್ಷಿಸಿದಾಗ ಆರು ಕೆ.ಜಿ.300 ಗ್ರಾಂ ಗಾಂಜಾ ಇರುವುದು ಗೊತ್ತಾಯಿತು. ಇದರ ಅಂದಾಜು ಮೌಲ್ಯ 60,000 ರೂ. ಎಂದು ಹೇಳಲಾಗಿದೆ.

ತಕ್ಷಣ ಕಾರವಾರದ ಎಎಸ್‌ಸಿ ಅವರಿಗೆ ಮಾಹಿತಿ ನೀಡಿದ್ದು, ವಿಧಿವಿಧಾನ ಗಳನ್ನು ಪೂರ್ಣಗೊಳಿಸಿದ ಬಳಿಕ ಅವರು ಪ್ಯಾಕೆಟ್‌ನ್ನು ಕಾರವಾರದ ಗ್ರಾಮಾಂತರ ಪೊಲೀಸರಿಗೆ ಮುಂದಿನ ಕ್ರಮಕ್ಕೆ ಹಸ್ತಾಂತರಿಸಿದರು.

ಈ ಕುರಿತು ಪ್ರಕರಣವೊಂದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಘಟನೆಯ ಕುರಿತು ಕೂಡಲೇ ಭಟ್ಕಳದ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ, ಯಾರಾದರೂ ಅಪರಾಧಿಗಳು ಕೋಚ್‌ನಲ್ಲಿ ಇರುವರೇ ಎಂಬುದನ್ನು ಪರಿಶೀಲಿಸುವಂತೆ ತಿಳಿಸಲಾಯಿತಾದರೂ, ಯಾವುದೇ ಅನುಮಾನಾಸ್ಪದ ವ್ಯಕ್ತಿ ಪತ್ತೆಯಾಗಲಿಲ್ಲ. ಇದೀಗ ಕಾರವಾರ ಗ್ರಾಮಾಂತರ ಪೊಲೀಸರು ಸಿಸಿಟಿವಿಯ ರೆರ್ಕಾಡಿಂಗ್‌ನ್ನು ಪರಿಶೀಲನೆ ನಡೆಸುತಿದ್ದಾರೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆಯ ಹಿನ್ನೆಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ರೈಲುಗಳ ಪರಿಶೋಧನೆಯನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಕಾರವಾರದ ಎಎಸ್‌ಸಿ ಅವರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News