ರಶ್ಯದ ಎಸ್-400 ಕ್ಷಿಪಣಿ ಖರೀದಿ ಬಗ್ಗೆ ಅಮೆರಿಕಕ್ಕೆ ವಿವರಣೆ ನೀಡಿದ್ದೇವೆ

Update: 2019-10-02 16:29 GMT

ವಾಶಿಂಗ್ಟನ್, ಅ. 2: ರಶ್ಯದಿಂದ ಎಸ್-400 ಕ್ಷಿಪಣಿಗಳನ್ನು ಖರೀದಿಸುವ ನಿರ್ಧಾರದ ಬಗ್ಗೆ ಭಾರತ ಅಮೆರಿಕದ ಡೊನಾಲ್ಡ್ ಟ್ರಂಪ್ ಸರಕಾರಕ್ಕೆ ವಿವರಣೆ ನೀಡಿದೆ ಎಂದು ಭಾರತದ ವಿದೇಶ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಂಗಳವಾರ ಹೇಳಿದ್ದಾರೆ. ಭಾರತದ ವಿವೇಚನೆಯನ್ನು ಅಮೆರಿಕ ಒಪ್ಪುತ್ತದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

‘‘ಎಸ್-400 ಕ್ಷಿಪಣಿ ಖರೀದಿ ಬಗ್ಗೆ ಭಾರತ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ನಾವು ಈ ಬಗ್ಗೆ ಅಮೆರಿಕದೊಂದಿಗೆ ಚರ್ಚಿಸಿದ್ದೇವೆ. ಮನವೊಲಿಸುವ ನನ್ನ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆಯಿದೆ’’ ಎಂದು ಜೈಶಂಕರ್ ನುಡಿದರು.

ರಶ್ಯದಿಂದ ಎಸ್-400 ಕ್ಷಿಪಣಿಗಳನ್ನು ಖರೀದಿಸುವ ನಿರ್ಧಾರಕ್ಕೆ ಭಾರತ ಅಂಟಿಕೊಂಡರೆ, ಸಿಎಎಟಿಎಸ್‌ಎ ಅಡಿ ಅಮೆರಿಕ ಭಾರತದ ವಿರುದ್ಧ ದಿಗ್ಬಂಧನಗಳನ್ನು ವಿಧಿಸುವ ಸಾಧ್ಯತೆ ಬಗ್ಗೆ ರಶ್ಯದ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ಈ ನಿರ್ದಿಷ್ಟ ವ್ಯವಹಾರ ನಮಗೆ ಯಾಕೆ ಮಹತ್ವದ್ದು ಎಂಬುದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಹಾಗಾಗಿ, ನೀವು ನನಗೆ ಕೇಳಿದ ಪ್ರಶ್ನೆ ಊಹಾತ್ಮಕ ಎಂದು ನನಗೆ ಅನಿಸುತ್ತದೆ’’ ಎಂದು ‘ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್‌ನ್ಯಾಶನಲ್ ಸ್ಟಡೀಸ್’ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಿಕ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News