ಭಾರತದ ಮೇಲೆ ಪಾಕ್ ಉಗ್ರರ ದಾಳಿ ಸಾಧ್ಯತೆ: ಅಮೆರಿಕ ಭೀತಿ

Update: 2019-10-02 16:37 GMT

ವಾಶಿಂಗ್ಟನ್, ಅ. 2: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ರದ್ದುಪಡಿಸಿದ ಬಳಿಕ, ಪಾಕಿಸ್ತಾನದ ಭಯೋತ್ಪಾದಕರು ಭಾರತದ ಮೇಲೆ ದಾಳಿಗಳನ್ನು ನಡೆಸಬಹುದು ಎಂಬ ಭೀತಿಯನ್ನು ಅಮೆರಿಕ ಮಂಗಳವಾರ ವ್ಯಕ್ತಪಡಿಸಿದೆ.

‘‘ಕಾಶ್ಮೀರಕ್ಕೆ ಸಂಬಂಧಿಸಿದ ಭಾರತೀಯ ಸಂವಿಧಾನದ 370ನೇ ವಿಧಿ ರದ್ದುಗೊಂಡ ಬಳಿಕ ಭಾರತದ ಮೇಲೆ ದಾಳಿ ನಡೆಸಬಹುದಾದ ಭಯೋತ್ಪಾದಕ ಗುಂಪುಗಳನ್ನು ಪಾಕಿಸ್ತಾನ ನಿಯಂತ್ರಿಸಬೇಕು ಎಂಬುದಾಗಿ ಹಲವು ದೇಶಗಳು ಬಯಸಿವೆ. ಈ ರೀತಿಯ ಸಂಘರ್ಷವನ್ನು ಚೀನಾ ಬಯಸುತ್ತದೆ ಅಥವಾ ಅದಕ್ಕೆ ಬೆಂಬಲ ನೀಡುತ್ತದೆ ಎನ್ನುವುದನ್ನು ನಾನು ನಂಬುವುದಿಲ್ಲ’’ ಎಂದು ಭಾರತ-ಪೆಸಿಫಿಕ್ ರಕ್ಷಣಾ ವ್ಯವಹಾರಗಳಿಗಾಗಿನ ಸಹಾಯಕ ರಕ್ಷಣಾ ಕಾರ್ಯದರ್ಶಿ ರಾಂಡಾಲ್ ಶ್ರಿವರ್ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದರು.

370ನೇ ವಿಧಿಯನ್ನು ಭಾರತ ರದ್ದುಪಡಿಸಿದ ಬಳಿಕ, ಚೀನಾ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನಕ್ಕೆ ಚೀನಾ ನೀಡುತ್ತಿರುವ ಬೆಂಬಲವು ಹೆಚ್ಚೆಂದರೆ ರಾಜತಾಂತ್ರಿಕ ಮತ್ತು ರಾಜಕೀಯ ಬೆಂಬಲವಾಗಿದೆ’’ ಎಂದು ಶ್ರಿವರ್ ನುಡಿದರು.

‘‘ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಅವರು (ಚೀನಿಯರು) ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದಾರೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ಕುರಿತ ಚರ್ಚೆಯನ್ನು ಕೈಗೆತ್ತಿಕೊಂಡರೂ, ಇಲ್ಲದಿದ್ದರೂ, ಚೀನಾವು ಪಾಕಿಸ್ತಾನವನ್ನು ಬೆಂಬಲಿಸುವುದು. ಆದರೆ, ಅದಕ್ಕಿಂತ ಆಚೆಗೆ ಚೀನಾ ಹೋಗುತ್ತದೆ ಎಂದು ನಾನು ಭಾವಿಸುವುದಿಲ್ಲ’’ ಎಂದು ಪೆಂಟಗನ್‌ನ ಹಿರಿಯ ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News