ವಿಧಿ 370 ರದ್ದುಗೊಳಿಸಿದ ಬಳಿಕ 144 ಮಕ್ಕಳ ಬಂಧನ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಜಮ್ಮುಕಾಶ್ಮೀರ ಹೈಕೋರ್ಟ್ ಸಮಿತಿ

Update: 2019-10-02 16:42 GMT
 ಫೋಟೊ: Reuters

ಹೊಸದಿಲ್ಲಿ, ಅ. 2: ಕೇಂದ್ರ ಸರಕಾರ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರದಲ್ಲಿ 144 ಮಕ್ಕಳನ್ನು ಬಂಧಿಸಲಾಯಿತು. ಆದರೆ, ಅನಂತರ 142 ಮಕ್ಕಳನ್ನು ಬಿಡುಗಡೆಗೊಳಿಸಲಾಯಿತು ಎಂದು ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯದ ಬಾಲ ನ್ಯಾಯ ಸಮಿತಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯದ ನಾಲ್ವರು ನ್ಯಾಯಾಧೀಶರ ಬಾಲ ನ್ಯಾಯ ಸಮಿತಿ ಸಲ್ಲಿಸಿದ ವರದಿಯಲ್ಲಿ ಮಕ್ಕಳನ್ನು ಅನಂತರ ಬಿಡುಗಡೆ ಮಾಡಲಾಗಿದೆ. ಬಾಲ ನ್ಯಾಯ ಕಾಯ್ದೆಯ ನಿಬಂಧನೆಗೆ ಕಟ್ಟು ನಿಟ್ಟಾಗಿ ಬದ್ಧರಾಗಿರುವುದರಿಂದ ಪೊಲೀಸ್ ಅಧಿಕಾರಿಗಳು ಯಾವುದೇ ಮಕ್ಕಳನ್ನು ಕಾನೂನು ಬಾಹಿರವಾಗಿ ಬಂಧಿಸಿಲ್ಲ ಎಂದು ಹೇಳಿದೆ.

ಜಮ್ಮು ಹಾಗೂ ಕಾಶ್ಮೀರ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಎಂ. ಮಾಗ್ರೆ, ಡಿ.ಎಸ್. ಠಾಕೂರ್, ಸಂಜೀವ್ ಕುಮಾರ್ ಹಾಗೂ ರಶೀದ್ ಅಲಿ ದಾರ್ ಅವರನ್ನೊಳಗೊಂಡ ನಾಲ್ವರು ಸದಸ್ಯರ ಬಾಲ ನ್ಯಾಯ ಸಮಿತಿ ತನಿಖೆ ನಡೆಸಿರುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಮಾಧ್ಯಮ ವರದಿ ಹಾಗೂ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಹೇಳಲಾದ ಆರೋಪ ಹಾಗೂ ಪ್ರತಿಪಾದನೆಯನ್ನು ಸ್ಪಷ್ಟವಾಗಿ ನಿರಾಕರಿಸಿದ ಶ್ರೀನಗರ ಡಿಜಿಪಿಯ ವರದಿಯನ್ನು ಸಲ್ಲಿಸಿದೆ.

  ವರದಿಯೊಂದಿಗೆ ಲಗತ್ತಿಸಲಾದ ದತ್ತಾಂಶದಲ್ಲಿ ಈ ವರ್ಷ ಆಗಸ್ಟ್ 5 ಹಾಗೂ ಸೆಪ್ಟಂಬರ್ 23ರ ನಡುವೆ ಪೊಲೀಸರು 18 ವರ್ಷ ವಯಸ್ಸಿಗಿಂತ ಕೆಳಗಿನ 144 ಮಕ್ಕಳನ್ನು ಬಂಧಿಸಿದ್ದರು. ಇವರಲ್ಲಿ 86 ಮಕ್ಕಳನ್ನು ಕಲ್ಲು ತೂರಾಟ ಹಾಗೂ ಶಾಂತಿಭಂಗದ ಆರೋಪದಲ್ಲಿ ಬಂಧಿಸಲಾಗಿದೆ. ಉಳಿದ ಮಕ್ಕಳನ್ನು ಗಲಭೆ, ಕಲ್ಲು ತೂರಾಟ, ಸಾರ್ವಜನಿಕ ಸೊತ್ತಿಗೆ ಹಾನಿ, ಸಂಚಾರ ತಡೆ ಹಾಗೂ ಪೊಲೀಸರ ಮೇಲೆ ದಾಳಿ ಆರೋಪದಲ್ಲಿ ಬಂಧಿಸಲಾಗಿದೆ. ಇವರಲ್ಲಿ 142 ಮಕ್ಕಳನ್ನು ಅನಂತರ ಬಿಡುಗಡೆ ಮಾಡಲಾಯಿತು. ಉಳಿದ ಇಬ್ಬರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ಸಮಿತಿ ಹೇಳಿದೆ.

ಈ ಪ್ರಕರಣ ಮಂಗಳವಾರ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಎಂ.ಆರ್. ಶಾ ಹಾಗೂ ಬಿ. ಗವಾಯಿ ಅವರನ್ನು ಒಳಗೊಂಡ ಪೀಠ, ಹೈಕೋರ್ಟ್‌ನ ಬಾಲ ನ್ಯಾಯ ಸಮಿತಿಯಿಂದ ವರದಿ ಸ್ವೀಕರಿಸಲಾಗಿದೆ. ಅಪ್ರಾಪ್ತರನ್ನು ಬಂಧನದಲ್ಲಿ ಇರಿಸಲಾಗಿದೆ ಎಂಬ ಆರೋಪವನ್ನು ನಿರಾಕರಿಸಲಾಗಿದೆ ಎಂದು ಮಕ್ಕಳ ಹಕ್ಕು ಹೋರಾಟಗಾರರಾದ ಏನಾಕ್ಷಿ ಗಂಗೂಲಿ ಹಾಗೂ ಶಾಂತಾ ಸಿನ್ಹಾ ಅವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಹುಸೇಫಾ ಅಹ್ಮದಿ ಅವರಿಗೆ ತಿಳಿಸಿತು.

ಸಮಿತಿಯ ವರದಿಗೆ ತಾನು ಪ್ರತಿಕ್ರಿಯೆ ಸಲ್ಲಿಸುವುದಾಗಿ ಅಹ್ಮದಿ ಹೇಳಿದರು. ವರದಿಗೆ ಪ್ರತಿಕ್ರಿಯೆ ಸಲ್ಲಿಸಲು ಅಹ್ಮದಿಗೆ ಪೀಠ ಅವಕಾಶ ನೀಡಿತು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿತು.

  ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಮಕ್ಕಳನ್ನು ಕಾನೂನು ಬಾಹಿರವಾಗಿ ಬಂಧನದಲ್ಲಿ ಇರಿಸಲಾಗಿದೆ ಎಂದು ಇಬ್ಬರು ಮಕ್ಕಳ ಹಕ್ಕು ಕಾರ್ಯಕರ್ತರು ಸಲ್ಲಿಸಿದ ಮನವಿಯಲ್ಲಿ ಆರೋಪಿಸಲಾದ ವಿಷಯಗಳಿಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ಸೆಪ್ಟಂಬರ್ 20ರಂದು ಸುಪ್ರೀಂ ಕೋರ್ಟ್ ಬಾಲ ನ್ಯಾಯ ಸಮಿತಿಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News