ಪಾಕ್‌ನಿಂದ ಡ್ರೋನ್ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರ ಕಳ್ಳ ಸಾಗಾಟ ವರದಿ: ಎನ್‌ಐಎ ತನಿಖೆಗೆ ಆದೇಶ

Update: 2019-10-02 16:43 GMT

ಹೊಸದಿಲ್ಲಿ, ಅ. 2: ಪಂಜಾಬ್‌ನ ಗಡಿ ಪ್ರದೇಶದ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಾಟ ಮಾಡಲು ಪಾಕಿಸ್ತಾನ ಡ್ರೋನ್‌ಗಳನ್ನು ಬಳಸುತ್ತಿರುವ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಲಿದೆ.

 ಪಂಜಾಬ್ ಹಾಗೂ ಅದರ ಸಮೀಪದ ರಾಜ್ಯಗಳಲ್ಲಿ ಸರಣಿ ಭಯೋತ್ಪಾದಕ ದಾಳಿ ನಡೆಸಲು ಪಾಕಿಸ್ತಾನ ಹಾಗೂ ಜರ್ಮನಿ ಮೂಲದ ಭಯೋತ್ಪಾದಕ ಸಂಘಟನೆಗಳಿಂದ ಬೆಂಬಲಿತ ಖಲಿಸ್ಥಾನ ಜಿಂದಾಬಾದ್ ಪಡೆ (ಕೆಝಡ್‌ಎಫ್) ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿರುವುದನ್ನು ಬೇಧಿಸಲಾಗಿದೆ ಎಂದು ಸೆಪ್ಟಂಬರ್ 22ರಂದು ಪಂಜಾಬ್ ಪೊಲೀಸರು ತಿಳಿಸಿದ್ದರು.

 ಪಾಕಿಸ್ತಾನದ ಆದೇಶದಂತೆ ಐಎಸ್‌ಐ, ಖಲಿಸ್ತಾನ ಜಿಂದಾಬಾದ್ ಪಡೆ ಹಾಗೂ ಇತರ ಸಂಘಟನೆಗಳು ಡ್ರೋನ್‌ಗಳನ್ನು ಬಳಸಿ ಭಾರತ-ಪಾಕಿಸ್ತಾನದ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ವಿಲೇವಾರಿ ಮಾಡುತ್ತಿದೆ ಎಂದು ಶಂಕಿಸಲಾಗಿದೆ ಎಂದು ಡಿಜಿಪಿ ದಿನಕರ್ ಗುಪ್ತಾ ಹೇಳಿದ್ದರು.

ಈ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ರಾಜ್ಯದಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಇಳಿಸಲು ಪಾಕಿಸ್ತಾನ ಡ್ರೋನ್‌ಗಳನ್ನು ಬಳಸುವ ಘಟನೆಗಳ ಕುರಿತು ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರಲ್ಲಿ ಆಗ್ರಹಿಸಿದ್ದರು.

 ಜಮ್ಮು ಹಾಗೂ ಕಾಶ್ಮೀರದಲ್ಲಿ ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಪಾಕಿಸ್ತಾನದ ಕುಟಿಲ ಕೃತ್ಯಗಳಲ್ಲಿ ಡ್ರೋನ್ ಘಟನೆ ಕೂಡ ಒಂದು ಎಂದು ಸಿಂಗ್ ಟ್ವಟ್ಟರ್‌ನಲ್ಲಿ ಹೇಳಿದ್ದರು. ಗಡಿ ರಾಜ್ಯಗಳಲ್ಲಿ ಡ್ರೋನ್‌ಗಳಿಂದ ಯಾವುದೇ ಬೆದರಿಕೆ ತಡೆಯಲು ಅಗತ್ಯದ ಕ್ರಮಗಳನ್ನು ಕೈಗೊಳ್ಳಲು ಭಾರತೀಯ ವಾಯು ಪಡೆ ಹಾಗೂ ಗಡಿ ಭದ್ರತಾ ಪಡೆಗೆ ನಿರ್ದೇಶನ ನೀಡುವಂತೆ ಅಮರಿಂದರ್ ಸಿಂಗ್ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News