×
Ad

ಮಂಗಳೂರು: ಮೇಲ್ತೆನೆ ‘ಕಥಾ’ ಪ್ರಶಸ್ತಿ ಪ್ರದಾನ

Update: 2019-10-03 20:20 IST

ಮಂಗಳೂರು, ಅ.3: ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ ‘ಮೇಲ್ತೆನೆ’ಯು ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ಬುಧವಾರ ದೇರಳಕಟ್ಟೆಯ ಚಿಂತನಾ ಗ್ರಂಥಾಲಯದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಮಾತೃಭಾಷೆಯನ್ನು ಪ್ರೀತಿಸದ ಮತ್ತು ಗೌರವಿಸದ ಯಾವನೇ ಒಬ್ಬ ಸ್ವತಃ ತನ್ನನ್ನೂ ಪ್ರೀತಿಸಲಾರ. ಯಾಕೆಂದರೆ ಪ್ರತಿಯೊಂದು ಭಾಷೆಗೆ ತನ್ನದೇ ಆದ ಶಕ್ತಿ ಇದೆ, ಹಿನ್ನಲೆ ಇದೆ. ಬ್ಯಾರಿ ಭಾಷೆ ಕೂಡ ಇತರ ಯಾವ ಭಾಷೆಗೂ ಕೀಳಲ್ಲ. ಒಂದು ಕಾಲದಲ್ಲಿ ನಾವೇ ನಮ್ಮ ಮಾತೃಭಾಷೆಯನ್ನು ಕೀಳೆಂದು ಭ್ರಮಿಸಿ ಕಾಲಹರಣದ ಮಾಡಿದ್ದರೂ ಇದೀಗ ಯುವ ಬ್ಯಾರಿಗಳಲ್ಲಿ ಮಾತೃಭಾಷಾ ಅಭಿಮಾನ ಮೂಡುತ್ತಿರುವುದು ಮತ್ತು ಅದಕ್ಕಾಗಿ ಅಲ್ಲಲ್ಲಿ ನಿರಂತರವಾಗಿ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಲೇಖಕ ಫಾರೂಕ್ ಉಳ್ಳಾಲ್ ಮತ್ತು ಚಿಂತನಾ ಗ್ರಂಥಾಲಯದ ನಿರ್ದೇಶಕ ಡಾ. ಅಬೂಸ್ವಾಲಿಹ್ ಅತಿಥಿಯಾಗಿ ಭಾಗವಹಿಸಿದ್ದರು. ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಥಾ ಸ್ಪರ್ಧೆಯ ವಿಜೇತರಾದ ಶಮೀಮಾ ಕುತ್ತಾರ್ (ಪ್ರಥಮ), ಇಬ್ರಾಹೀಂ ಬಾತಿಷ್ ಗೋಳ್ತಮಜಲು (ದ್ವಿತೀಯ), ಆಯಿಶತ್ ಸಫ್ವಾನಾ ಉಳ್ಳಾಲಬೈಲ್ (ತೃತೀಯ) ಬಹುಮಾನ ಸ್ವೀಕರಿಸಿದರು.

ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ರಫೀಕ್ ಕಲ್ಕಟ್ಟ, ಬಿ.ಎಂ.ಕಿನ್ಯ, ಶಅದ್ ಸಜಿಪ, ಕಬೀರ್ ಹಾಸನ, ಶರೀಫ್ ಕಾಡುಮಠ, ಅನ್ಸಾರ್ ಕಾಟಿಪಳ್ಳ, ಆಶೀರುದ್ದೀನ್ ಮಂಜನಾಡಿ, ಝೈನ್ ಎಂ.ಇನೋಳಿ ಕವನ ವಾಚಿಸಿದರು. ಬಶೀರ್ ಅಹ್ಮದ್ ಕಿನ್ಯ ಕವಿಗೋಷ್ಠಿ ಉದ್ಘಾಟಿಸಿದರು. ಇಸ್ಮತ್ ಪಜೀರ್ ಗೋಷ್ಠಿ ನಿರ್ವಹಿಸಿದರು.

ವಿದ್ಯಾರ್ಥಿ ಶಫೀಕ್ ಮಲಾರ್ ಕಿರಾಅತ್ ಪಠಿಸಿದರು. ಅಧ್ಯಕ್ಷ ಹಂಝ ಮಲಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ಮುಹಮ್ಮದ್ ಭಾಷಾ ನಾಟೆಕಲ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News