ಮಣಿಪಾಲ: ಅ.5ರಂದು ರಾಜ್ ಚೆಂಗಪ್ಪ ಉಪನ್ಯಾಸ
ಉಡುಪಿ, ಅ.3: ಕೊಡಗು ಮೂಲದ ದೇಶದ ಖ್ಯಾತನಾಮ ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ ‘ಇಂಡಿಯಾ ಟುಡೆ’ ಸಮೂಹದ ಸಂಪಾದಕೀಯ ನಿರ್ದೇಶಕರಾಗಿರುವ ರಾಜ್ ಚೆಂಗಪ್ಪ ಅವರು ಮಾಹೆಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ಆಯೋಜಿಸುವ ಐದನೇ ಎ.ವಿ.ಕಾಮತ್ ದತ್ತಿ ಉಪನ್ಯಾಸದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಅ.5ರ ಶನಿವಾರ ಅಪರಾಹ್ನ 3:30ಕ್ಕೆ ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನ ಚೈತ್ಯಾ ಹಾಲ್‌ನಲ್ಲಿ ಎಂಐಸಿಯ ಸ್ಥಾಪಕ-ನಿರ್ದೇಶಕ ರಾಗಿದ್ದ, ಹಿರಿಯ ಪತ್ರಕರ್ತ ಎಂ.ವಿ.ಕಾಮತ್ ಅವರ ನೆನಪಿನಲ್ಲಿ ದತ್ತಿ ಉಪನ್ಯಾಸ ನಡೆಯಲಿದೆ.
ಇಂಡಿಯಾ ಟುಡೇ ಪಾಕ್ಷಿಕದ ಬೆಂಗಳೂರು ವರದಿಗಾರರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ರಾಜ್ ಚೆಂಗಪ್ಪ, ಕೆಲ ವರ್ಷದ ಬಳಿಕ ದಿಲ್ಲಿಗೆ ವರ್ಗಾವಣೆಗೊಂಡು ರಕ್ಷಣಾ ಕ್ಷೇತ್ರ ಹಾಗೂ ಅಣ್ವಸ್ತ್ರ ವಿಷಯಗಳಲ್ಲಿ ವಿಶೇಷ ಪರಿಣಿತಿ ಪಡೆದಿದ್ದರು. ಬಳಿಕ ಅವರು ಪಂಜಾಬ್ ಮೂಲದ ‘ದಿ ಟ್ರಿಬ್ಯೂನ್’ ಪತ್ರಿಕಾ ಸಮೂಹದ ಪ್ರಧಾನ ಸಂಪಾದಕರಾಗಿ ಕೆಲ ವರ್ಷ ಸೇವೆ ಸಲ್ಲಿಸಿ, ಮತ್ತೆ ಇಂಡಿಯಾ ಟುಡೇಗೆ ಮರಳಿದ್ದರು.
ದೇಶದ ಪರಮಾಣು ಅಸ್ತ್ರಗಳ ಕುರಿತು ಬೆಳಕು ಚೆಲ್ಲುವ ಕೃತಿ ‘ವೆಪನ್ಸ್ ಆಫ್ ಪೀಸ್: ದಿ ಸಿಕ್ರೇಟ್ ಸ್ಟೋರಿ ಆಫ್ ಇಂಡಿಯಾಸ್ ಕ್ವೆಸ್ಟ್ ಟು ಬಿ ನ್ಯೂಕ್ಲಿಯರ್ ಪವರ್’ ಭಾರೀ ಜನಪ್ರಿಯತೆಯನ್ನು ಪಡೆದಿತ್ತು. ದೇಶದ ರಾಜಕೀಯ ವಿಷಯಗಳ ಜೊತೆ ಜೊತೆಗೆ ಅವರು ಪರಿಸರ ಹಾಗೂ ಅಭಿವೃದ್ಧಿ ವಿಷಯಗಳಲ್ಲೂ ವಿಶೇಷ ಪರಿಣಿತಿಯನ್ನು ಪಡೆದಿದ್ದರು. ಎಂಟು ವರ್ಷ ಅವರು ಪ್ರಧಾನ ಮಂತ್ರಿಗಳ ಹವಾಮಾನ ಬದಲಾವಣೆ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
1987ರಲ್ಲಿ ಗ್ರಾಮೀಣ ವರದಿಗಾಗಿ ‘ಸ್ಟೇಟ್‌ಮನ್ ಪ್ರಶಸ್ತಿ’ ಪಡೆದಿದ್ದ ರಾಜ್ ಚೆಂಗಪ್ಪ, 1998ರಲ್ಲಿ ಅತ್ಯುನ್ನತ ವರದಿಗಾರಿಕೆಗೆ ‘ಪ್ರೇಮ್ ಭಾಟಿಯಾ ಪ್ರಶಸ್ತಿ’ಯನ್ನು ಪಡೆದಿದ್ದರು.