ಜಾನ್ಸನ್‌ರಿಂದ ಹೊಸ ‘ಬ್ರೆಕ್ಸಿಟ್’ ಒಪ್ಪಂದದ ಪ್ರಸ್ತಾವ

Update: 2019-10-03 16:32 GMT

ಮ್ಯಾಂಚೆಸ್ಟರ್ (ಬ್ರಿಟನ್), ಅ. 3: ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಬುಧವಾರ ಐರೋಪ್ಯ ಒಕ್ಕೂಟಕ್ಕೆ ಹೊಸ ‘ಬ್ರೆಕ್ಸಿಟ್’ ಒಪ್ಪಂದದ ಪ್ರಸ್ತಾವವನ್ನು ಸಲ್ಲಿಸಿದ್ದಾರೆ ಹಾಗೂ ಇದನ್ನು ಐರೋಪ್ಯ ಒಕ್ಕೂಟ ಎಚ್ಚರಿಕೆಯಿಂದ ಸ್ವಾಗತಿಸಿದೆ.

 ಈ ತಿಂಗಳು ಕೊನೆಯ ದಿನದಂದು ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಲು ಗಡುವು ನಿಗದಿಯಾಗಿರುವ ಹಿನ್ನೆಲೆಯಲ್ಲಿ, ಒಪ್ಪಂದ-ಸಹಿತ ಬ್ರೆಕ್ಸಿಟ್‌ನ ಸಾಧ್ಯತೆಗಳು ಗೋಚರಿಸಿವೆ. ಆದರೆ, ಉಭಯ ತಂಡಗಳ ನಡುವಿನ ಭಿನ್ನಾಭಿಪ್ರಾಯಗಳ ಅಂತರ ಈಗಲೂ ದೊಡ್ಡದಾಗಿಯೇ ಇದೆ.

 ರಾಜಿಮಾಡಿಕೊಳ್ಳುವಂತೆ ಜಾನ್ಸನ್ ಐರೋಪ್ಯ ಒಕ್ಕೂಟವನ್ನು ಒತ್ತಾಯಿಸಿದ್ದಾರೆ. ಆದರೆ ಐರೋಪ್ಯ ಒಕ್ಕೂಟ ರಾಜಿ ಮಾಡಿಕೊಳ್ಳದಿದ್ದರೆ, ಬ್ರಿಟನ್ ಅಕ್ಟೋಬರ್ 31ರಂದು ಯಾವುದೇ ಒಪ್ಪಂದವಿಲ್ಲದೆ ಐರೋಪ್ಯ ಒಕ್ಕೂಟದಿಂದ ಹೊರಹೋಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಜಾನ್ಸನ್ ಸಲ್ಲಿಸಿರುವ ನೂತನ ಪ್ರಸ್ತಾವಗಳಲ್ಲಿನ ‘ಧನಾತ್ಮಕ ಅಂಶ’ಗಳನ್ನು ಐರೋಪ್ಯ ಕಮಿಶನ್ ಅಧ್ಯಕ್ಷ ಜೀನ್-ಕ್ಲಾಡ್ ಜಂಕರ್ ಸ್ವಾಗತಿಸಿದ್ದಾರೆ. ಆದರೆ, ಕೆಲವು ಸಮಸ್ಯೆಗಳಿರುವುದನ್ನೂ ಅವರು ಗಮನಿಸಿದ್ದಾರೆ.

‘‘ಒಪ್ಪಂದಸಹಿತ ಬ್ರೆಕ್ಸಿಟನ್ನು ಐರೋಪ್ಯ ಒಕ್ಕೂಟ ಬಯಸುತ್ತದೆ. ನಾವು ಒಗ್ಗಟ್ಟಾಗಿದ್ದೇವೆ ಹಾಗೂ ಇದು ಸಂಭವಿಸುವಂತೆ ಮಾಡಲು ದಿನದ 24 ಗಂಟೆಯೂ ಕೆಲಸ ಮಾಡಲು ತಯಾರಿದ್ದೇವೆ’’ ಎಂದರು.

2016ರ ಜೂನ್‌ನಲ್ಲಿ ನಡೆದ ಬ್ರೆಕ್ಸಿಟ್ ಜನಮತಗಣನೆಯಲ್ಲಿ, ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಜನಾದೇಶ ಹೊರಬಿದ್ದಿತ್ತು. ಅದಾಗಿ ಮೂರು ವರ್ಷಗಳ ಬಳಿಕವೂ ಬ್ರೆಕ್ಸಿಟ್ ಪ್ರಕ್ರಿಯೆ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ.

ಸಂಸತ್ತನ್ನು ಮತ್ತೆ ಅಮಾನತಿನಲ್ಲಿಡಲು ಜಾನ್ಸನ್ ನಿರ್ಧಾರ

ಬ್ರಿಟನ್ ಸಂಸತ್ತನ್ನು ಮತ್ತೊಮ್ಮೆ ಅಕ್ಟೋಬರ್ 8ರಿಂದ 14ರವರೆಗೆ ಅಮಾನತಿನಲ್ಲಿಡಲು ಪ್ರಧಾನಿ ಬೊರಿಸ್ ಜಾನ್ಸನ್ ಉದ್ದೇಶಿಸಿದ್ದಾರೆ ಎಂದು ಅವರ ಡೌನಿಂಗ್ ಸ್ಟ್ರೀಟ್ ಕಚೇರಿ ಬುಧವಾರ ತಿಳಿಸಿದೆ.

ಸಂಸತ್ತನ್ನು ಅಮಾನತಿನಲ್ಲಿಡಲು ಅವರು ಈ ಹಿಂದೆ ಮಾಡಿರುವ ಪ್ರಯತ್ನವನ್ನು ನ್ಯಾಯಾಲಯವೊಂದು ವಿಫಲಗೊಳಿಸಿದೆ.

ಈ ಹಿಂದೆ, ಸೆಪ್ಟಂಬರ್ 10ರಿಂದ ಅಕ್ಟೋಬರ್ 14ರವರೆಗೆ ಸಂಸತ್ತನ್ನು ಅಮಾನತಿನಲ್ಲಿಡುವಂತೆ ಬೊರಿಸ್ ಜಾನ್ಸನ್ ಬ್ರಿಟನ್ ರಾಣಿ ದ್ವಿತೀಯ ಎಲಿಝಬೆತ್‌ರನ್ನು ಕೋರಿದ್ದರು. ಹಾಗೂ ಅವರ ಕೋರಿಕೆಯಂತೆ ಸಂಸತ್ತನ್ನು ರಾಣಿ ಅಮಾನತಿನಲ್ಲಿಟ್ಟಿದ್ದರು.

ಆದರೆ, ಇದನ್ನು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಘೋಷಿಸಿತು ಹಾಗೂ ಸೆಪ್ಟಂಬರ್ 25ರಂದು ಸಂಸತ್ತು ಮರುಚಾಲನೆಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News