ಯಶವಂತಿ ಸುವರ್ಣ, ಪಿ.ಎನ್.ಆಚಾರ್ಯಗೆ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ
ಉಡುಪಿ, ಅ.3: ಈ ವರ್ಷದಿಂದ ಯುವ ವಾಹಿನಿ ಉಡುಪಿ ಘಟಕದ ಮೂಲಕ ನೀಡಲಾಗುವ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಗೆ ಕಾರ್ಕಳ ನಕ್ರೆಯ ಹಿರಿಯ ಲೇಖಕಿ ಯಶವಂತಿ ಎಸ್. ಸುವರ್ಣ ಹಾಗೂ ಜಾನಪದ ಕಲಾವಿದ ಪ್ರಶಸ್ತಿಗೆ ಖ್ಯಾತ ಚಿತ್ರಕಲಾವಿದ ಪಿ.ಎನ್. ಆಚಾರ್ಯ ಪುತ್ತೂರು ಅವರು ಆಯ್ಕೆಯಾಗಿದ್ದಾರೆ.
ಗುರುವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಖ್ಯಾತ ಜಾನಪದ ವಿದ್ವಾಂಸ ರಾದ ಬನ್ನಂಜೆ ಬಾಬು ಅಮೀನ್ ಅವರು ಈ ವಿಷಯವನ್ನು ಪ್ರಕಟಿಸಿದರು. 2002ರಲ್ಲಿ ಬನ್ನಂಜೆ ಬಾಬು ಅಮೀನ್ ಅವರ ಹಿರಿತನದಲ್ಲಿ ಪ್ರಾರಂಭಗೊಂಡ ಕೆಮ್ಮಲಜೆ ಜಾನಪದ ಪ್ರಕಾಶನದ ಮೂಲಕ ಈ ಪ್ರಶಸ್ತಿಗಳನ್ನು ಕಳೆದ ವರ್ಷದ ವರೆಗೆ ನೀಡಲಾಗುತ್ತಿತ್ತು. ಜಾನಪದ ಬರಹಗಾರರನ್ನು ಪ್ರೋತ್ಸಾಹಿಸುವುದು ಹಾಗೂ ತನ್ನ ಕೃತಿಗಳನ್ನು ಮುದ್ರಿಸಿ ಪ್ರಕಟಿಸುವುದು ಕೆಮ್ಮಲಜೆ ಪ್ರಕಾಶನದ ಉದ್ದೇಶವಾಗಿತ್ತು ಎಂದವರು ಹೇಳಿದರು.
ಕಳೆದ ವರ್ಷದವರೆಗೆ ತಲಾ 10,000ರೂ.ನಗದು ಬಹುಮಾನವನ್ನೊಳ ಗೊಂಡ ಎರಡು ಪ್ರಶಸ್ತಿಗಳನ್ನು ಜಾನಪದ ಬರಹಗಾರರು ಹಾಗೂ ಕಲಾವಿದರಿಗೆ ನೀಡಲಾಗುತ್ತಿತ್ತು. ಆದರೆ ಆರ್ಥಿಕ ಕಾರಣಗಳಿಗಾಗಿ ಈ ವರ್ಷದಿಂದ ಪ್ರಶಸ್ತಿಯನ್ನು ಯುವವಾಹಿನಿ ನೀಡಲಿದೆ ಎಂದು ಅವರು ವಿವರಿಸಿದರು.
ಈ ಬಾರಿಯ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ ಅ.13ರ ರವಿವಾರ ಸಂಜೆ 5 ಗಂಟೆಗೆ ಉದ್ಯಾವರ ಬಲಾಯಿಪಾದೆಯ ನಾಗಪ್ಪ ಕಾಂಪ್ಲೆಕ್ಸ್‌ನ ಯುವವಾಹಿನಿ ಸಭಾಭವನದ ‘ಕಟಪಾಡಿ ಗರಡಿಮನೆ ನಾಗಪ್ಪ ಪೂಜಾರಿ ವೇದಿಕೆ’ಯಲ್ಲಿ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದರು.
ತುಳುಕೂಟ ಉಡುಪಿಯ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ತೆಂಕನಿಡಿಯೂರು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ದುಗ್ಗಪ್ಪ ಕಜೆಕಾರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ನರೇಶ್‌ಕುಮಾರ್ ಸಸಿಹಿತ್ಲು ಹಾಗೂ ಬನ್ನಂಜೆ ಬಾಬು ಅಮೀನ್ ಮುಖ್ಯ ಅತಿಥಿಗಳಾಗಿರುವರು.
ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ನಾರಾಯಣ ಬಿ.ಎಸ್., ಮಾಜಿ ಅಧ್ಯಕ್ಷರಾದ ರಘುನಾಥ ಮಾಬಿಯಾನ್, ಸಂತೋಷ್‌ಕುಮಾರ್ ಹಾಗೂ ಭಾಸ್ಕರ ಸುವರ್ಣ ಉಪಸ್ಥಿತರಿದ್ದರು.