×
Ad

‘ದೇವರು ಬೇಕಾಗಿದ್ದಾರೆ’ ಚಿತ್ರ 11ಕ್ಕೆ ಬಿಡುಗಡೆ

Update: 2019-10-03 22:28 IST

ಉಡುಪಿ, ಅ.3: 16 ಮಂದಿ ಸೇರಿ ರಚಿಸಿಕೊಂಡಿರುವ ‘ಹಾರಿರೆನ್ ಮೂವೀಸ್’ ಮೂಲಕ ನಿರ್ಮಿಸಿರುವ ‘ದೇವರು ಬೇಕಾಗಿದ್ದಾರೆ’ ಕನ್ನಡ ಚಲನಚಿತ್ರ ಅ.11ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ಕಥೆ, ಚಿತ್ರಕಥೆ, ಸಂಕಲನ ಹಾಗೂ ನಿರ್ದೇಶನ ಮಾಡಿರುವ ಶಿರ್ವ ಮೂಲದ ಕೇಂಜ ಚೇತನ್‌ಕುಮಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ತನ್ನ ನಿರ್ದೇಶನದಲ್ಲಿ ಹೊರಬರುತ್ತಿರುವ ಎರಡನೇ ಚಿತ್ರವಾಗಿದ್ದು, ಮೊದಲ ಚಿತ್ರ ‘ಪ್ರೇಮಗೀಮ ಜಾನೆ ದೋ’ ಎಂದರು. 60 ಲಕ್ಷ ರೂ. ಬಜೆಟ್‌ನಲ್ಲಿ ಕೋಲಾರದ ಗುಡಿಬಂಡೆ,ಬಾಗೇಪಲ್ಲಿ, ಕೈವಾರ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ ಎಂದರು.

ಅಪಘಾತದಲ್ಲಿ ಹೆತ್ತವರನ್ನು ಕಳೆದುಕೊಂಡ ಪುಟ್ಟ ಮಗು ಅಪ್ಪು, ತನ್ನ ತಂದೆ- ತಾಯಿ ದೇವರ ಬಳಿ ಹೋಗಿದ್ದಾರೆ ಎಂದು ತಿಳಿದು, ದೇವರನ್ನು ಹುಡುಕುತ್ತಾ ಬೆಂಗಳೂರಿಗೆ ಹೋಗುವ ಚಿತ್ರ ಇದಾಗಿದೆ. ಚಿತ್ರದಲ್ಲಿ ಅಪ್ಪುವಿನ ಪಾತ್ರ ನಿರ್ವಹಿಸಿರುವ ಶಿರಸಿಯ 8 ವರ್ಷ ಪ್ರಾಯದ ಮಾಸ್ಟರ್ ಅನೂಪ್ ಅವರ ನಟನೆ ಅದ್ಭುತವಾಗಿದೆ ಎಂದು ಖ್ಯಾತ ತುಳು ಸಾಹಿತಿಯಾಗಿರುವ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಅವರ ಮೊಮ್ಮಗನಾದ ಚೇತನ್‌ಕುಮಾರ್ ತಿಳಿಸಿದರು.

ಚಿತ್ರದಲ್ಲಿ ಹಿರಿಯ ನಟ ಎಸ್.ಶಿವರಾಮ, ಪ್ರಸಾದ ವಶಿಷ್ಟ, ಸತ್ಯನಾಥ್, ಅಟೋ ನಾಗರಾಜ್, ನಾಗೇಶ್ ಕಾರ್ತಿಕ್ ಮುಂತಾದವರು ನಟಿಸಿದ್ದಾರೆ. ಜ್ಯೂವೆನ್ ಸಿಂಗ್ ಚಿತ್ರದ ಸಂಗೀತ ನಿರ್ದೇಶಕರಾದರೆ, ರುದ್ರಮುನಿ ಬೆಳೆಗೆರೆ ಛಾಯಾಗ್ರಾಹಣ ನಡೆಸಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಾಲನಟ ಅನೂಪ್, ಚಲನಚಿತ್ರ ನಿರ್ದೇಶಕ ಕೃಷ್ಣಪ್ಪ ಉಪ್ಪೂರು, ಅಶೋಕ್ ಕುಮಾರ್ ಶೆಟ್ಟಿ, ರುದ್ರಮುನಿ ಬೆಳಗೆರೆ ಹಾಗೂ ಸತ್ಯನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News