×
Ad

ಮಣಿಪಾಲ: ತಂಡದಿಂದ ಇಬ್ಬರ ಮೇಲೆ ಹಲ್ಲೆ

Update: 2019-10-03 22:32 IST

 ಮಣಿಪಾಲ, ಅ.3: ಫಾಸ್ಟ್‌ಪುಡ್ ತರುವುದಕ್ಕೆ ತಡರಾತ್ರಿ ಮಣಿಪಾಲಕ್ಕೆ ಬಂದಿದ್ದ ಯುವಕನ ಮೇಲೆ ಹಳೆಯ ದ್ವೇಷಕ್ಕೆ ಪ್ರತಿಕಾರ ತೀರಿಸುವ ಸಂಚು ರೂಪಿಸಿದ್ದ 7-8 ಮಂದಿ ಸೇರಿಕೊಂಡು ಮರಣಾಂತಿಕ ಹಲ್ಲೆ ನಡೆಸಿದ್ದು, ಹೊಡೆದಾಟ ತಪ್ಪಿಸಲು ಹೋದ ಅವರ ಸ್ನೇಹಿತನಿಗೂ ಹಲ್ಲೆ ನಡೆಸಿರುವ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಹಲ್ಲೆಗೊಳಗಾದ ಯುವಕರನ್ನು ರೆಮಿ ಡಿಸಿಲ್ವಾ ಹಾಗೂ ಪುತ್ತೂರು ಸಂತೆಕಟ್ಟೆಯ ಚೇತನ್ ಎಂದು ಹೇಳಲಾಗಿದೆ. ರೆಮಿ ಡಿಸಿಲ್ವಾ ಫಾಸ್ಟ್‌ಪುಡ್ ಡಿಲೆವರಿ ಬಾಯ್‌ನಿಂದ ಫಾಸ್ಟ್‌ಪುಡ್ ಸ್ವೀಕರಿಸುವ ಸಲುವಾಗಿ ಮಣಿಪಾಲ ವಿ.ಪಿ. ನಗರದ ಚೆರಿಶ್ ಕಟ್ಟಡದ ಕೆಳಗೆ ಹೋಗಿದ್ದರು. ಈ ವೇಳೆ ಸಿಟೌಟ್‌ನ ಸ್ಟೆಪ್‌ನಲ್ಲಿ ರೆಮಿ ಡಿಸಿಲ್ವಾ ಅವರಿಗೆ 4, 5 ಜನ ಹಲ್ಲೆ ಮಾಡಿದ್ದು, ಆ ವೇಳೆ ಸ್ಥಳಕ್ಕೆ ಆಗಮಿಸಿದ್ದ ಚೇತನ್ ಹಲ್ಲೆ ಮಾಡದಂತೆ ಕೇಳಿ ಕೊಂಡಿದ್ದರು. ಈ ವೇಳೆ ಚೇತನ್ ಅವರನ್ನು ದೂಡಿದ ಹಲ್ಲೆಕೋರರು, ಹಾಕಿ ಸ್ಟಿಕ್‌ನಿಂದ ರೆಮಿ ಡಿಸಿಲ್ವಾ ಅವರ ಕುತ್ತಿಗೆಗೆ ಹೊಡೆದಿದ್ದರು ಎಂದು ಚೇತನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ವೇಳೆ ಚೇತನ್ ಜೋರಾಗಿ ಬೊಬ್ಬೆ ಹಾಕಿದ್ದು, ಆರೋಪಿಗಳು ಸೇರಿಕೊಂಡು ಚೇತನ್ ಹಾಗೂ ರೆಮಿ ಡಿಸಿಲ್ವಾ ಅವರನ್ನು ಎಳೆದುಕೊಂಡು ಕಾರಿನಲ್ಲಿ ಕೂರಿಸಿ ಪರ್ಕಳದ ಹಾಡಿಗೆ ಕರೆದುಕೊಂಡು ಹೋಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಇನ್ನೊಂದು ಅಲ್ಲಿಗೆ ಕಾರು ಬಂದಿದ್ದು, ಆ ಕಾರಿನಲ್ಲಿ ಮಹಾನ್ ಮತ್ತು ಇತರೆ 2,3 ಸಹಿತ 7,8 ಮಂದಿ ಸೇರಿಕೊಂಡು ರೆಮಿ ಡಿಸಿಲ್ವಾ ಅವರಿಗೆ ಹಲ್ಲೆ ನಡೆಸಿದ್ದರು. ತಡೆಯಲು ಹೋದ ಚೇತನ್‌ನ್ನು ತಡೆದಿದ್ದರು. ರೆಮಿ ಡಿಸಿಲ್ವಾ ಅವರ ಮೂಗಿನಿಂದ ರಕ್ತ ಬರುತ್ತಿದ್ದು, ಚೇತನ್ ಮನವಿ ಮೇರೆಗೆ ಕೃತ್ಯದ ಬಗ್ಗೆ ಬಾಯಿ ಬಿಟ್ಟರೆ ಕೊಲ್ಲುವುದಾಗಿ ಬೆದರಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆ ಬಳಿ ಬಿಟ್ಟು ಹೋಗಿದ್ದರು ಎಂದು ದೂರಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿ ಮಹಾನ್ ಹಾಗೂ ರೆಮಿ ಹೊಡೆದಾಡಿಕೊಂಡಿದ್ದರು. ಹಳೆಯ ದ್ವೇಷದಿಂದ ಕೃತ್ಯ ಎಸಗಿದ್ದಾರೆ ಎಂದು ದೂರಲಾಗಿದೆ. ರೆಮಿ ಅವರ ಕೈಕಾಲು, ತಲೆ, ಕುತ್ತಿಗೆ, ಮೂಗು ಹಾಗೂ ಹೊಟ್ಟೆಗೆ ಗಾಯಗಳಾಗಿವೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News