ಸುವರ್ಣ ನ್ಯೂಸ್ ಹೆಸರಲ್ಲಿ ಬ್ಲ್ಯಾಕ್ ಮೇಲ್: ನಕಲಿ ಪತ್ರಕರ್ತನ ವಿರುದ್ಧ ದೂರು

Update: 2019-10-03 17:39 GMT

ಬಂಟ್ವಾಳ: ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯ ವಿವಾದವೊಂದಕ್ಕೆ ಸಂಬಂಧಿಸಿ ಸಿದ್ದಕಟ್ಟೆ ನಿವಾಸಿ ಅಶೋಕ್ ಹಲಾಯಿ ಎಂಬಾತ ತಾನು ಸುವರ್ಣ ನ್ಯೂಸ್ ಕ್ಯಾಮರಾ ಮೆನ್ ಎಂದು ಹೇಳಿಕೊಂಡು ಇಂದು ಎಸ್.ವಿ.ಎಸ್ ಶಿಕ್ಷಣ ಸಂಸ್ಥೆಗೆ ಹೋಗಿ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಸುದ್ದಿ ಪ್ರಸಾರವಾಗದಂತೆ ಮಾಡಲು ತನಗೆ 50 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, ಸಂಸ್ಥೆಯ ಆಡಳಿತ ಮಂಡಳಿಯವರು ಆತನ ಬ್ಲ್ಯಾಕ್ ಮೇಲ್ ಗೆ‌ ಮಣಿದು 50 ಸಾವಿರದ ಚೆಕ್ ನೀಡಿದ್ದಾರೆ. ಆ ಬಳಿಕ ಶಿಕ್ಷಣ ಸಂಸ್ಥೆಯವರು ಸುವರ್ಣ ನ್ಯೂಸ್ ನ ಮಂಗಳೂರು ವರದಿಗಾರರನ್ನ ಸಂಪರ್ಕಿಸಿದಾಗ ಅಶೋಕ್ ಹಲಾಯಿ ಎಂಬಾತ ನಕಲಿ ಪತ್ರಕರ್ತ ಎನ್ನುವುದು ಗೊತ್ತಾಗಿದೆ.

ಆ ಬಳಿಕ ಆತನ ಮಾಹಿತಿ ಕಲೆ ಹಾಕಿದಾಗ ಈತ ಯಾವುದೋ ಯೂ ಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಅದರ ಹೆಸರಿನ ಜೊತೆ ಸುವರ್ಣ ನ್ಯೂಸ್ ಹೆಸರಲ್ಲೂ ಬ್ಲ್ಯಾಕ್ ಮೇಲ್ ಗೆ ಇಳಿದಿದ್ದ ಎನ್ನುವುದು ಗೊತ್ತಾಗಿದೆ.

ಹೀಗಾಗಿ ಎಸ್.ವಿ.ಎಸ್ ಆಡಳಿತ ಮಂಡಳಿಯಿಂದ ಆತನ ದೂರವಾಣಿ ಸಂಖ್ಯೆ ಪಡೆದ ಬಳಿಕ ಸುವರ್ಣ ನ್ಯೂಸ್ ನ ಮಂಗಳೂರು ವರದಿಗಾರರು ಆತನಿಗೆ ಕರೆ ಮಾಡಿ ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಆತ ಆ 50 ಸಾವಿರದ ಚೆಕ್ ಅನ್ನು ಶಿಕ್ಷಣ ಸಂಸ್ಥೆಗೆ ವಾಪಾಸ್ ಕೊಟ್ಟು ಕ್ಷಮೆ ಕೋರಿ ಪೊಲೀಸ್ ದೂರು ನೀಡದಂತೆ ವಿನಂತಿಸಿದ್ದಾನೆ ಎಂದು ತಿಳಿದುಬಂದಿದೆ.

ಈತನ ವಿರುದ್ಧ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News