ಅಪಹೃತಗೊಂಡಿದ್ದ ಭಾರತ ಮೂಲದ ಅಮೆರಿಕನ್ ಮಿಲಿಯಾಧೀಶ ಅತ್ರೆ ಶವ ಪತ್ತೆ

Update: 2019-10-03 17:58 GMT

ವಾಷಿಂಗ್ಟನ್,ಅ.3: ಮಂಗಳವಾರ ಬೆಳಗಿನ ಜಾವ ಕ್ಯಾಲಿಫೋರ್ನಿಯಾದ ಸಾಂತಾ ಕ್ರೂಝ್‌ನ ತನ್ನ ನಿವಾಸದಿಂದ ಅಪಹರಿಸಲ್ಪಟಿದ್ದ ಭಾರತೀಯ ಮೂಲದ ಮಿಲಿಯಾಧೀಶ ತುಷಾರ್ ಅತ್ರೆ (50) ಅವರ ಶವವು ಅವರ ಬಿಎಂಡಬ್ಲು ಕಾರಿನಲ್ಲಿ ಪತ್ತೆಯಾಗಿದೆ. ಸಾವಿಗೆ ಕಾರಣವನ್ನು ತನಿಖಾಧಿಕಾರಿಗಳು ತಿಳಿಸಿಲ್ಲ.

 ಸಿಲಿಕಾನ್ ವ್ಯಾಲಿಯ ಕಾರ್ಪೊರೇಟ್ ಉದ್ಯಮಗಳ ಅಗತ್ಯಗಳನ್ನು ಪೂರೈಸುವ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಅತ್ರೆನೆಟ್ ಇಂಕ್‌ನ ಮಾಲಿಕರಾಗಿದ್ದ ಅತ್ರೆ ವರ್ಷದ ಹಿಂದಷ್ಟೇ ಇಂಟರ್‌ಸ್ಟಿಷಿಯಲ್ ಸಿಸ್ಟಮ್ಸ್ ಹೆಸರಿನ ಮರಿಜುವಾನಾ ತಯಾರಿಕೆ ಕಂಪನಿಯನ್ನು ಆರಂಭಿಸಿದ್ದರು. ಅವರು ವೆಬ್‌ಸೈಟ್ ಡಿಸೈನ್ ಸಂಸ್ಥೆಯೊಂದರ ಮಾಲಿಕರೂ ಆಗಿದ್ದರು.

ಮಂಗಳವಾರ ನಸುಕಿನ ಮೂರು ಗಂಟೆಯ ಸುಮಾರಿಗೆ ಅತ್ರೆ ನಿವಾಸಕ್ಕೆ ನುಸುಳಿದ್ದ ಹಲವಾರು ಶಂಕಿತರು ಅವರನ್ನು ಅವರ ಗೆಳತಿಯ ಬಿಎಂಡಬ್ಲ್ಯು ಕಾರಿನಲ್ಲಿ ಅಪಹರಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡು ಅದೇ ದಿನ ಮಧ್ಯಾಹ್ನ ಸಾಂತಾ ಕ್ರೂಝ್ ಪರ್ವತದ ಬಳಿ ಕಾರನ್ನು ಪತ್ತೆ ಹಚ್ಚಿದ್ದು,ಅತ್ರೆ ಯವರ ಶವ ಅದರಲ್ಲಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರಿಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News