ಕಾಪು: ಅಮೂಲ್ಯ ದಾಖಲೆಗಳಿದ್ದ ಪರ್ಸ್ ಮರಳಿಸು ಮೂಲಕ ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ
ಕಾಪು, ಅ.4: ರಸ್ತೆ ಬದಿ ಸಿಕ್ಕಿದ ಅಮೂಲ್ಯ ದಾಖಲೆಗಳಿದ್ದ ಪರ್ಸ್‌ನ್ನು ವಾರೀಸುದಾರರಿಗೆ ಮರಳಿಸುವ ಮೂಲಕ ಕಾಪುವಿನ ರಿಕ್ಷಾ ಚಾಲಕರು ಪ್ರಾಮಾಣಿಕತೆ ಮೆರೆದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಕಾಪು ಪೊಲಿಪುವಿನ ರಿಕ್ಷಾ ಚಾಲಕ ಹುಸೈನಾರ್ ಅವರಿಗೆ ಪಾಂಗಾಳ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪರ್ಸ್‌ವೊಂದು ಸಿಕ್ಕಿತು. ಅದನ್ನು ಪರಿಶೀಲಿಸಿ ದಾಗ ಅದರಲ್ಲಿ ಗುರುತಿನ ಚೀಟಿ, ಬೈಕಿನ ದಾಖಲೆ, ಯುಎಇ ರೆಸಿಡೆಂಟ್ ಗುರುತಿನ ಚೀಟಿ ಸೇರಿದಂತೆ ಅಮೂಲ್ಯ ದಾಖಲೆಗಳಿದ್ದವು.
ಇದು ಬೈಂದೂರು ಶಿರೂರಿನ ನಿರೋಡಿಯ ದಡ್ಡಿ ಮುಹಮ್ಮದ್ ಫೈಝಾನ್ ಎಂಬವರದ್ದು ಎಂದು ತಿಳಿದು ಬಂತು. ಕೂಡಲೇ ಹುಸೈನಾರ್ ಈ ಮಾಹಿತಿ ಯನ್ನು ವಾಟ್ಸಾಪ್‌ನಲ್ಲಿ ಹರಿಬಿಟ್ಟರು. ಈ ವಿಚಾರ ಕೆಲವೇ ಗಂಟೆಗಳಲ್ಲಿ ಪರ್ಸ್‌ನ ವಾರಸುದಾರ ಫೈಝಾನ್‌ಗೆ ತಲುಪಿತು. ಕೂಡಲೇ ಅವರು ಹುಸೈನಾರ್‌ನನ್ನು ಸಂಪರ್ಕಿಸಿ, ಸಂಜೆ ವೇಳೆ ಕಾಪುವಿಗೆ ಆಗಮಿಸಿದರು.
ಸಂಜೆ ಕಾಪು ಪೊಲೀಸ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಫೈಝಾನ್ ಅವರಿಗೆ ಪರ್ಸ್‌ನನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭ ಹುಸೈನಾರ್, ಬಶೀರ್ ಜನಪ್ರಿಯ, ಮಜೀದ್ ಕಾಪು ಹಾಜರಿದ್ದರು. ಎರಡು ದಿನಗಳಲ್ಲಿ ಯುಎಇಗೆ ತೆರಳಲಿದ್ದ ಫೈಝಾನ್, ಅಲ್ಲಿನ ಗುರುತಿನ ಚೀಟಿ ಕಳೆದುಕೊಂಡು ಆತಂಕದಲ್ಲಿದ್ದರು.