ಉಡುಪಿ: ಮುಖ್ಯಪ್ರಾಣ ಗುಡಿ ಛಾವಣಿಗೆ ಸ್ವರ್ಣ ಕವಚ
ಉಡುಪಿ, ಅ.4:ಉಡುಪಿ ಶ್ರೀಕೃಷ್ಣಮಠದಲ್ಲಿ ಕೃಷ್ಣ ದೇವರ ಬಲ ಪಾರ್ಶ್ವ ದಲ್ಲಿರುವ ಮುಖ್ಯಪ್ರಾಣ ದೇವರ ಗುಡಿಯ ಮುಖ ಮಂಪಟದ ನವೀಕರಣ ಕಾರ್ಯ ಇದೀಗ ಪೂರ್ಣಗೊಂಡಿದ್ದು, ಇದರ ಛಾವಣಿಗೂ ಸ್ವರ್ಣ ಕವಚ ಅಳವಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಕೃಷ್ಣ ದೇವರ ಗರ್ಭಗುಡಿ ಮೇಲ್ಛಾವಣಿಗೆ ಸ್ವರ್ಣಕವಚ ಹೊದಿಸಲಾಗಿದ್ದು, ಇದೀಗ ಶಿಥಿಲಗೊಂಡಿದ್ದ ಮುಖ್ಯಪ್ರಾಣ ದೇವರ ಗುಡಿಯ ಮುಖ ಮಂಟಪದ ಜೀರ್ಣೋದ್ಧಾರ ಕಾರ್ಯವನ್ನು ತಿಂಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು. ಪ್ರಸ್ತುತ ಮುಖಮಂಟಪಕ್ಕೆ ಶಿಲಾಮಯ ಗೋಡೆ ಹಾಗೂ ಅದರ ಸುತ್ತಲೂ ಮರದ ದಳಿಗಳನ್ನು 10 ಲಕ್ಷ ರೂ. ವೆಚ್ಚದಲ್ಲಿ ರಚಿಸಲಾಗಿದೆ.
ಮುಂದಿನ ಹಂತದಲ್ಲಿ ಮರದ ಮೇಲ್ಛಾವಣಿಗೆ ಬಂಗಾರದ ಹೊದಿಕೆ ಅಳವಡಿಸುವ ಸಂಕಲ್ಪವನ್ನು ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥರು ಕೆಗೊಂಡಿದ್ದಾರೆ.
ಗರ್ಭಗುಡಿಯ ಮುಂಭಾಗ ಮತ್ತು ಎಡಪಾರ್ಶ್ವದಲ್ಲಿ ಆಂಗ್ಲ ಅಕ್ಷರದ ಎಲ್ ಆಕಾರದಲ್ಲಿ ಮೇಲ್ಛಾವಣಿ ಇದ್ದು, ಅಷ್ಟು ಜಾಗಕ್ಕೆ ಮಾತ್ರ ಹೊದಿಕೆ ಅಳವಡಿಸಲು ಅವಕಾಶವಿದೆ. ಸುಮಾರು 60 ಚದರಡಿ ವ್ಯಾಪ್ತಿಗೆ 2 ಕೆ.ಜಿ. ಬಂಗಾರದ ಅಗತ್ಯ ವಿದ್ದು, ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ.
ಸುಮಾರು ಐದು ಶತಮಾನಗಳ ಹಿಂದೆ ಸೋದೆ ಮಠದ ಶ್ರೀವಾದಿರಾಜರು ಅಯೋಧ್ಯೆಯಿಂದ ಮುಖ್ಯಪ್ರಾಣ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿ ದ್ದರೆಂದು ಹೇಳಲಾಗಿದೆ. ಶತಮಾನಗಳಷ್ಟು ಹಳೆಯದಾದ ಮಣ್ಣಿನಯೊಂದಿಗೆ ಅದಕ್ಕೆ ಅಳವಡಿಸಲಾಗಿದ್ದ ಮರ ಹಾಗೂ ತಾಮ್ರದ ಹೊದಿಕೆಯೂ ಶಿಥಿಲಗೊಂಡು ಜೀರ್ಣಾವಸ್ಥೆಯಲ್ಲಿತ್ತು.
ಇದೀಗ ಮುಖಮಂಟಪಕ್ಕೆ ಶಿಲಾಮಯ ಗೋಡೆ ನಿರ್ಮಿಸಲಾಗಿದೆ.ಮಠಕ್ಕೆ ಭೇಟಿ ನೀಡುವ ಭಕ್ತಾಧಿಗಳಿಗೆ ತೊಂದರೆಯಾಗದಂತೆ ರಾತ್ರಿಯ ವೇಳೆ ಇವುಗಳ ಜೋಡಣೆ ಕಾರ್ಯಕ್ರಮವನ್ನು ಶಿಲ್ಪಿಗಳು ನೆರವೇರಿಸಿದ್ದರು.