ಅವೈಜ್ಞಾನಿಕ ಬುಲ್‌ಟ್ರಾಲ್ ಮೀನುಗಾರಿಕೆ: ಬೋಟುಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಧರಣಿ

Update: 2019-10-04 14:24 GMT

ಮಲ್ಪೆ, ಅ.4: ಕೇಂದ್ರ ಹಾಗೂ ರಾಜ್ಯ ಸರಕಾರ ನಿಷೇಧಿಸಿರುವ ಅವೈಜ್ಞಾನಿಕ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಬೇಸಿಗೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ನೇತೃತ್ವದಲ್ಲಿ ಮೀನುಗಾರರು ಶನಿವಾರ ಮಲ್ಪೆ ಬಂದರಿನಲ್ಲಿರುವ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ ಎದುರು ಧರಣಿ ನಡೆಸಿದರು.

ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳ ದಿರುವುದರಿಂದ 370 ಇಂಜಿನ್ ಬೋಟಿನವರು ನಿರಂತರವಾಗಿ ಹಗಲು ರಾತ್ರಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಸ್ಥಳೀಯ ಬಡ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಮೀನು ಗಾರಿಕೆ ಇಲ್ಲದೆ ಉಪವಾಸ ಇರುವಂತಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ್ ಕರ್ಕೇರ ಆರೋಪಿಸಿದರು.

ಮಲ್ಪೆ ಸಮುದ್ರದಲ್ಲಿ ಅ.3ರಂದು ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದ ಎರಡು ಬೋಟುಗಳ ವಿರುದ್ದ ಕರಾವಳಿ ಕವಾಲು ಪಡೆ ಮತ್ತು ಮೀನುಗಾರಿಕೆ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದೆ. ಆದರೆ ಅವರ ವಿರುದ್ಧ ಯಾವುದೇ ಕ್ರಮವನ್ನು ಈವರೆಗೆ ತೆಗೆದುಕೊಂಡಿಲ್ಲ. ಆದುದರಿಂದ ಕೂಡಲೇ ನಿಷೇಧಿತ ಮೀನುಗಾರಿಕೆ ನಡೆಸುವವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಒತ್ತಾಯಿಸಿದರು.

ನಮ್ಮ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಲಾಗಿದ್ದು, ಈ ಬಗ್ಗೆ ಸರಕಾರ ಸ್ಪಂದಿಸದಿದ್ದರೆ ಅ.10ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾಮಟ್ಟದ ಸಮಸ್ತ ಸಂಪ್ರದಾಯಿಕ ನಾಡದೋಣಿ ಮೀನುಗಾರರಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬಳಿಕ ಕಚೇರಿಗೆ ಆಗಮಿಸಿದ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಪ್ರವೀಣ್ ಶ್ರೀಯಾನ್, ಕಾರ್ಯದರ್ಶಿ ರತ್ನಾಕರ ಕರ್ಕೇರ, ಮುಖಂಡರಾದ ರಾಜೇಶ್ ಕೋಟ್ಯಾನ್, ಲಕ್ಷ್ಮೀನಾರಾಯಣ, ವಾಸು ಕರ್ಕೇರ, ಹರೀಶ್ ತಿಂಗಳಾಯ ಮೊದಲಾದವರು ಉಪಸ್ಥಿತರಿದ್ದರು.

ಟ್ರಾಲ್‌ಬೋಟಿಗೆ ನೋಟೀಸ್ ಜಾರಿಎರಡು ಬೋಟುಗಳಲ್ಲಿ ನಿಷೇಧಿತ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸು ತ್ತಿರುವ ಕುರಿತು ಬಂದ ಮಾಹಿತಿಯಂತೆ ಅ.3ರಂದು ಸಂಜೆ 7:30ಕ್ಕೆ ಮಲ್ಪೆ ಕರಾವಳಿ ಕಾವಲು ಪಡೆಯವರ ಜೊತೆಗೆ ಸಮುದ್ರಕ್ಕೆ ತೆರಳಿ ಪರಿಶೀಲಿಸಿದ್ದೇವೆ. ಆಗ ಒಂದು ಬೋಟು ಪರಾರಿಯಾಯಿತು. ಆ ಬೋಟಿನ ನಂಬರನ್ನು ಕತ್ತಲಲ್ಲಿ ನೋಡಲು ಸಾಧ್ಯವಾಗಿಲ್ಲ. ಇನ್ನೊಂದು ಬೋಟಿನ ನಂಬರ್ ಗುರು ತಿಸಲಾಗಿದೆ. ಅವರಿಗೆ ನೋಟೀಸ್ ಜಾರಿ ಮಾಡಲಾಗುತ್ತದೆ. ಮುಂದೆ ಪರಿ ಶೀಲಿಸಿ ಕಾನೂನಿನಂತೆ ಕ್ರಮ ಜರಗಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಗಣೇಶ್ ಕೆ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News