×
Ad

ಸೂಲಿಬೆಲೆ ಎಚ್ಚರಿಕೆಗೋಸ್ಕರ ಗದರಿಸಿದ್ದಾರೆ: ಕೋಟ ಶ್ರೀನಿವಾಸ ಪೂಜಾರಿ

Update: 2019-10-04 19:57 IST

ಉಡುಪಿ, ಅ.4: ಎಚ್ಚರಿಕೆಗೋಸ್ಕರ ನಮ್ಮವರೇ ನಮ್ಮನ್ನು ಗದರಿಸುತ್ತಾರೆ. ಅದರ ಅರ್ಥ ಚಕ್ರವರ್ತಿ ಸೂಲಿಬೆಲೆ ನಮ್ಮ ಮೇಲೆ ಕೋಪಗೊಂಡಿದ್ದಾರೆ ಎಂಬುದು ಅಲ್ಲ. ಹಾಗಂತ ಅವರು ನಮ್ಮನ್ನು ಬಿಡುತ್ತಾರೆ ಎಂಬುದು ಕೂಡಾ ಅಲ್ಲ. ನಮ್ಮಲ್ಲಿ ಸಮಸ್ಯೆಗಳಿದ್ದರೆ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ಬಹುದೊಡ್ಡ ದುರಂತಗಳು ನಡೆದಾಗ ಹಣ ಎಷ್ಟಿದ್ದರೂ ಸಾಕಾಗುವುದಿಲ್ಲ. ಯಡಿಯೂರಪ್ಪ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಹೇಳಿಲ್ಲ ಎಂದರು.

ದೇಶದ್ರೋಹಿ ಎಂಬ ಸದಾನಂದ ಗೌಡ ಪದಬಳಕೆ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ತಪ್ಪಾಗಿದ್ದರೆ ನಾವೇ ಸರಿ ಮಾಡಿಕೊಳ್ಳುತ್ತೇವೆ. ಸೂಲಿಬೆಲೆ, ಸದಾನಂದ ಗೌಡರನ್ನು ಭೇಟಿಯಾದಾಗ ಚೆನ್ನಾಗಿ ಮಾತನಾಡು ತ್ತಾರೆ. ಸದಾನಂದ ಗೌಡ ಸೂಲಿಬೆಲೆಯನ್ನು ಕಂಡು ನಗುತ್ತಾರೆ. ಅಲ್ಲಿಗೆ ಈ ಪ್ರಕರಣ ಮುಗಿದುಬಿಡುತ್ತದೆ. ಪಾರ್ಟಿಗಾಗಿ ದುಡಿದವರು ಅಭಿವೃದ್ಧಿ ವಿಚಾರ ವಾಗಿ ಮಾತನಾಡಿದ್ದಾರೆ. ಅವರನ್ನು ಸಮಾಧಾನ ಮಾಡಿದ್ದೇವೆ. ಕಾರ್ಯಕರ್ತರ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ. ನಮ್ಮ ಗುರಿ ಅಭಿವೃದ್ಧಿ ಕಡೆಗೆ ಇದೆ ಎಂದು ತಿಳಿಸಿದರು.

ರಾಜ್ಯ ಸಿದ್ದಪಡಿಸಿದ ನಷ್ಟದ ವರದಿಯ ನಿರಾಕರಣೆ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಟ, ಕೇಂದ್ರ ಸರಕಾರ ನಮ್ಮ ವರದಿಯನ್ನು ತಿರಸ್ಕರಿಸಿಲ್ಲ. ಹೆಚ್ಚುವರಿ ಮಾಹಿತಿಯನ್ನು ಕೇಳಿರಬಹುದು. ಮಾಹಿತಿ ಕೇಳಿದ್ದಾರೆ ಅಂದರೆ ವಾಪಾಸು ವರದಿ ಕಳಿಸಲಾಗಿದೆ ಎಂಬುದು ಅರ್ಥವಲ್ಲ. ಕೇಂದ್ರ ಮಾಹಿತಿ ಕೇಳಿದೆ ಅಂದರೆ ಹಣ ಕೊಡಲು ನಿರ್ಧಾರ ಮಾಡಿದ್ದಾರೆ ಎಂದರ್ಥ. ಮೂರು ನಾಲ್ಕು ದಿನಗಳಲ್ಲಿ ಗರಿಷ್ಟ ಮೊತ್ತದ ಹಣ ರಾಜ್ಯಕ್ಕೆ ಬರುತ್ತದೆ. ಆ ಮೂಲಕ ಎಲ್ಲ ಗೊಂದಲಗಳು ಶೀಘ್ರ ಬಗೆಹರಿಯಲಿದೆ ಎಂದರು.

ವಿಧಾನಸಭೆ ವಿಪಕ್ಷ ನಾಯಕ ಆಯ್ಕೆ ವಿಚಾರ ಕುರಿತ ಪ್ರಶ್ನೆಗೆ, ಅವರಿಗಿರುವ ಆತಂಕ ಅವರೇ ಸರಿಪಡಿಸಿಕೊಳ್ಳಬೇಕು. ಕಾಂಗ್ರೆಸ್‌ನಲ್ಲಿ ನಾಯಕತ್ವ ಕೊರತೆ ಜಟಿಲವಾಗಿದೆ. ಅವರ ಸಮಸ್ಯೆಗಳನ್ನು ಶೀಘ್ರ ಪರಿಹಾರಪಡಿಸಿಕೊಳ್ಳಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News