ದೇವರು ಸತ್ಯ ಎಂದು ನಂಬಿದ್ದ ಗಾಂಧಿ, ಸತ್ಯವೇ ದೇವರು ಎಂದು ನಿಲುವು ಬದಲಾಯಿಸಿಕೊಂಡರು: ಪ್ರೊ.ಫಣಿರಾಜ್
ಉಡುಪಿ, ಅ.4: ದೇವರು ಸತ್ಯ ಎಂದು ನಂಬಿದ್ದ ಗಾಂಧೀಜಿ, ಸತ್ಯವೇ ದೇವರು ಎಂದು ತಮ್ಮ ನಿಲುವನ್ನು ಬದಲಾಯಿಸಿಕೊಂಡರು ಎಂದು ಮಣಿಪಾಲದ ಎಂಐಟಿಯ ಪ್ರಾಧ್ಯಾಪಕ ಪ್ರೊ.ಫಣಿರಾಜ್ ಹೇಳಿದ್ದಾರೆ.
ಹಿರಿಯಡ್ಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಮಹಾತ್ಮಾ ಗಾಂಧಿ ತತ್ವಪ್ರಣೀತ ವಾರ್ಷಿಕ ವಿಶೇಷ ಶಿಬಿರದಲ್ಲಿ ಗಾಂಧೀಜೀ ಅವರ ಎರಡು ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
‘ಗಾಂಧೀ: ಸತ್ಯನಿಷ್ಠೆ’ಕುರಿತ ಮಾತನಾಡಿದ ಪ್ರೊ.ಫಣಿರಾಜ್, ಸತ್ಯ ಎಂಬುದು ಭಾರತದ ತತ್ತ್ವಶಾಸ್ತ್ರದ ಪ್ರಶ್ನೆ. ಸತ್ ಎಂದರೆ ಏನು ನಿಜವಾಗಿಯೂ ಇದೆಯೋ ಅದು. ಸತ್ಯವನ್ನು ತಿಳಿಯುವುದು ಸುಲಭವಲ್ಲ. ಸತ್ಯವನ್ನು ಅರಿತುಕೊಂಡು ಸ್ಥಿತಿಯನ್ನು ಬದಲಾಯಿಸುವುದರ ಕಡೆಗೆ ಚಲಿಸಬೇಕು ಎಂದು ನಂಬಿದ್ದರು ಎಂದರು.
ದೇವರು ಸತ್ಯ ಎಂದು ನಂಬಿದ್ದ ಗಾಂಧೀಜಿ, ಸತ್ಯವೇ ದೇವರು ಎಂದು ತಮ್ಮ ನಿಲುವನ್ನು ಬದಲಾಯಿಸಿಕೊಂಡರು. ಸತ್-ಸತ್ಯ-ಸತ್ಯಾಗ್ರಹ ಬಹಳ ಕಠಿಣವಾದ ಮಾರ್ಗ. ಸಮಾಜದಲ್ಲಿ ಬದಲಾವಣೆಯನ್ನು ತರಬೇಕಾದರೆ ಈ ಕಠಿಣ ಮಾರ್ಗವನ್ನು ಅನುಸರಿಸಬೇಕು ಎಂದು ತಿಳಿಸಿದ್ದು ಗಾಂಧೀಜೀ ಅವರ ಸತ್ಯನಿಷ್ಠೆ ಎಂದರು.
ಹಿರಿಯ ಗಾಂಧಿವಾದಿ ಆರೂರು ಮಂಜುನಾಥ ರಾವ್, ಗಾಂಧೀಜಿ ಚಿಂತನೆ ಮತ್ತು ನಿಸರ್ಗದತ್ತ ಆರೋಗ್ಯ ಕುರಿತು ಮಾತನಾಡಿ, ಗಾಂಧೀ ಎಲ್ಲರೊಳಗಿನ ವಿಶಿಷ್ಟ ಶಕ್ತಿ. ಅವರ ವ್ಯಕ್ತಿತ್ವ ಎಲ್ಲರಲ್ಲೂ ಇದೆ. ಅದನ್ನು ನಾವು ರೂಢಿಸಿ ಕೊಳ್ಳಬೇಕಷ್ಟೆ. ಅವರು ತೆರೆದ ಕಣ್ಣುಗಳಿಂದ ನಿಸರ್ಗವನ್ನು ನೋಡಿದವರು. ಆರೋಗ್ಯದ ಮೂಲವನ್ನು ಆಹಾರ ಮತ್ತು ಪರಿಸರದಲ್ಲಿ ಕಂಡುಕೊಂಡಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸತ್ಯಾನಂದ ನಾಯಕ್ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಡಾ. ನಿಕೇತನ ಮಾತನಾಡಿ, ಸತ್ಯ ಮತ್ತು ಸುಳ್ಳಿನ ನಡುವೆ ಅರೆಬೆಂದ ಸತ್ಯ ಎಂಬುದೊಂದಿದ್ದು, ಇದರ ನಡುವೆ ನಾವು ಬದುಕುತ್ತಿದ್ದೇವೆ. ಗಾಂಧೀ ತತ್ತ್ವವನ್ನು ಸರಿಯಾಗಿ ಅರ್ಥೈಸಿಕೊಂಡು ಸತ್ಯದ ಅನ್ವೇಷಕರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಆನಂದ್ ಎಂ. ಬಿ., ಎನ್.ಎಸ್.ಎಸ್. ಯೋಜನಾಧಿಕಾರಿ ಪ್ರವೀಣ ಶೆಟ್ಟಿ, ಸುಬಾಷ್ ಹೆಚ್. ಕೆ., ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಎನ್ನೆಸ್ಸೆಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ಶ್ರೇಯಾ ಕೆ. ಶೆಟ್ಟಿ ಸ್ವಾಗತಿಸಿದರು. ಕ್ಷಮಾ ಹಾಗೂ ಪ್ರತ್ಯೇಕ್ಷ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗುರುನಾಥ್ ವಂದಿಸಿದರು.