×
Ad

ಮುಂದಿನ ತಲೆಮಾರಿಗೆ ಅರಣ್ಯ ಉಳಿಸಿ: ಜಿ.ಜಗದೀಶ್

Update: 2019-10-04 21:23 IST

ಉಡುಪಿ, ಅ.4: ನಮ್ಮ ಹಿಂದಿನ ತಲೆಮಾರಿನವರು ಅರಣ್ಯವನ್ನು ಉಳಿಸಿ, ಬೆಳೆಸಿದ ಕಾರಣ ಅದರ ಪ್ರಯೋಜನವನ್ನು ನಾವು ಪಡೆಯುತ್ತಿದ್ದೇವೆ. ನಾವೂ ಸಹ ನಮ್ಮ ಮುಂದಿನ ತಲೆಮಾರಿನ ಪ್ರಯೋಜನಕ್ಕೆ ಅರಣ್ಯವನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಶುಕ್ರವಾರ ಕರ್ನಾಟಕ ಅರಣ್ಯ ಇಲಾಖೆ ಕುಂದಾಪುರ ವಿಭಾಗ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್‌ಕ್ಲಬ್ ಉಡುಪಿ ಸಹಯೋಗದೊಂದಿಗೆ ಬಡಗಬೆಟ್ಟಿನ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನ ದಲ್ಲಿ ನಡೆದ ‘ವೃಕ್ಷೋತ್ಸವ-2019’ ಅರಣ್ಯ, ವನ್ಯಜೀವಿ ಹಾಗೂ ಪರಿಸರದ ಆಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇತ್ತೀಚಿನ ದಿನಗಳಲ್ಲಿ ಅರಣ್ಯ ಸಂಪತ್ತು ನಶಿಸುತ್ತಿದ್ದು, ಇದನ್ನು ಸುಧಾರಿಸಲು ಅರಣ್ಯ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಟ್ಟು ಬೆಳೆಸಿ ಮುಂದಿನ ತಲೆಮಾರಿಗೆ ಗಿಡ, ಪ್ರಾಣಿ, ಪಕ್ಷಿ ಅರಣ್ಯ ಸಂಪತ್ತನ್ನು ಉಳಿಸಿ ತೋರಿಸು ವಂತಾಗಬೇಕು. ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ಮಾಡಲಾಗಿರುವ ವನ್ಯಜೀವಿಗಳ ಪ್ರತಿಮೆಯನ್ನು ಮುಂದಿನ ಜನಾಂಗ ಜೀವಂತವಾಗಿ ನೋಡುವಂತಾಗಬೇಕು. ಇದು ಅರಣ್ಯ ಸಂರಕ್ಷಿಸಿದರೇ ಮಾತ್ರ ಸಾಧ್ಯ. ಉಡುಪಿಯ ಈ ಟ್ರೀ ಪಾರ್ಕ್ ಜಿಲ್ಲೆಗೆ ಬೇಟಿ ನೀಡುವ ಪ್ರವಾಸಿರು ವೀಕ್ಷಿಸಲೇಬೇಕಾದ ಪ್ರವಾಸ ತಾಣಗಳಲ್ಲಿ ಒಂದಾಗಬೇಕು. ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಎಲ್ಲರಿಗೂ ತಿಳಿಯುವಂತಾಗಲು ಮಾಹಿತಿ ಕೇಂದ್ರವನ್ನು ಇಲ್ಲಿ ನಿರ್ಮಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಮಲ ಕೆ. ಮಾತನಾಡಿ, ಅರಣ್ಯ ಜೀವನದ ಮೂಲ, ಅರಣ್ಯ ಇದ್ದರೆ ಮಾತ್ರ ಜೀವನ ಸಾಧ್ಯ. ವನಮಹೋತ್ಸವಗಳಂತಹ ಸಸ್ಯ ಸಂಪತ್ತನ್ನು ವೃದ್ಧಿಸುವ ಹಾಗೂ ಕಾಪಾಡುವ ಕಾರ್ಯ ಒಂದೇ ದಿನಕ್ಕೆ ಸೀಮಿತವಾಗಿರದೇ ಪ್ರತಿನಿತ್ಯದ ಕಾಯಕ ವಾಗಬೇಕು. ಪೂರ್ವಜರು ನೀಡಿರುವ ಅರಣ್ಯ ಸಂಪತ್ತನ್ನು ರಕ್ಷಿಸುವ ಕಾರ್ಯ ವನ್ನು ವಿದ್ಯಾರ್ಥಿಗಳು ಸ್ವಇಚ್ಚೆಯಿಂದ ಮಾಡಿ, ಮುಂದಿನ ಜನಾಂಗಕ್ಕೆ ಉಡುಗೊರೆಯಾಗಿ ನೀಡಬೇಕು ಎಂದರು.

ಅರಣ್ಯ ಇಲಾಖೆ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನೀತ್ ಪಾಠಕ್ ಮಾತನಾಡಿ, ವೃಕ್ಷೋತ್ಸವ ಕಾರ್ಯಕ್ರಮವನ್ನು ನಾಲ್ಕು ಗೋಡೆಯ ಒಳಗೆ ನಡೆಸದೇ ಪ್ರಕೃತಿಯ ಮಧ್ಯದಲ್ಲಿ ನಡೆಸಿರುವುದು ಪ್ರಶಂಸಾರ್ಹ. ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನ ಚಿಕ್ಕದಾದರೂ ಚೊಕ್ಕವಾಗಿದೆ. ಇಲ್ಲಿ ನಿರ್ಮಿಸಲಾದ ವನ್ಯಜೀವಗಳ ಪ್ರತಿಕೃತಿಗಳು ಈ ಉದ್ಯಾನ ವನದ ಸೌಂದರ್ುವನ್ನು ಇಮ್ಮಡಿಗೊಳಿಸಿವೆ ಎಂದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳಬೆಟ್ಟು ಮಾತನಾಡಿದರು. ಇದೇ ಸಂದರ್ಭದಲ್ಲಿ ಖ್ಯಾತ ಕಲಾವಿದ ಪುರುಷೋತ್ತಮ ಅಡ್ವೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ವಿವಿಧ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಕಿರು ನಾಟಕ ಪದರ್ಶನ, ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮಕ್ಕಳ ಮನೆ ನೇತೃತ್ವ ವಹಿಸಿದ ಗಣೇಶ್ ಕುಂದಾಪುರರನ್ನು ಸನ್ಮಾನಿಸಲಾ ಯಿತು. ಮಕ್ಕಳ ಮನೆಯಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳಿಂದ ತಯಾರಿ ಸಲಾದ ಬುಟ್ಟಿ ಇನ್ನಿತರ ವಸ್ತುಗಳ ಪ್ರದರ್ಶನ ಹಾಗೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಯಿತು.

ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಕುಂದಾಪುರ ವಲಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಪರ್ಡ್ ಲೋಬೋ ಸ್ವಾಗತಿಸಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಚಾಲಕ ನಾಗರಾಜ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News