ತೆಂಕ ಎಕ್ಕಾರು ಯುವತಿ ನಾಪತ್ತೆ
ಮಂಗಳೂರು, ಅ.4: ತೆಂಕ ಎಕ್ಕಾರು ಗ್ರಾಮದ ಹುಣ್ಸೆಕಟ್ಟೆಯ ಯುವತಿ ಮೇಖಾ (19) ಅ.2 ರಂದು ಮಂಗಳೂರಿನ ಕೆ.ಎಸ್. ರಾವ್ ರಸ್ತೆಯ ಆಕಾಶ್ ನೀಟ್ ಕೋಚಿಂಗ್ ಸೆಂಟರ್ ಹತ್ತಿರದ ಗ್ರಂಥಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರಟು ಹೋದವಳು ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದಾಳೆ.
ಕೊಚಿಂಗ್ ಕ್ಲಾಸ್‌ನಲ್ಲಿ ಕಲಿಯುತ್ತಿರುವ ವಿಷಯದ ಬಗ್ಗೆ ಚರ್ಚಿಸಿ ಬರುತ್ತೇನೆ. ಅಲ್ಲಿಗೆ ತನ್ನ ಸ್ನೇಹಿತರು ಕೂಡ ಬರುತ್ತಾರೆ ಎಂದು ಮನೆಯಿಂದ ಹೊರಡುವಾಗ ಆಕೆ ತಿಳಿಸಿದ್ದಳು. ಇದೀಗ ಆಕೆಯ ಬಗ್ಗೆ ಖಾಸಗಿ ನೀಟ್ ಕೋಚಿಂಗ್ ಸೆಂಟರ್ ಜೆಇಇ, ಐಐಟಿನಲ್ಲಿ ಮತ್ತು ಮೇಖಾಳ ಸ್ನೇಹಿತರಲ್ಲಿ ವಿಚಾರಿಸಿ ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಹೆತ್ತವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಚಹರೆ: ಕಾಣೆಯಾದ ಮೇಖಾ 5 ಅಡಿ 3 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕಪ್ಪು ಉದ್ದ ತಲೆ ಕೂದಲು ಹೊಂದಿದ್ದು, ಕಪ್ಪು ಮತ್ತು ಬಿಳಿ ಬಣ್ಣದ ಚೂಡಿದಾರ, ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾಳೆ. ಇಂಗ್ಲಿಷ್, ಕನ್ನಡ, ಮಲಯಾಳ ಭಾಷೆ ಮಾತನಾಡುತ್ತಾಳೆ.
ಪತ್ತೆಯಾದಲ್ಲಿ ಬಜ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.