ಮಣ್ಣಗುಡ್ಡ : ತಡೆಗೋಡೆ ಕಾಮಗಾರಿಗೆ ಚಾಲನೆ
ಮಂಗಳೂರು, ಅ.4: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡೆ ವಾರ್ಡಿನ ಮಂಗಳಾ ಕ್ರೀಡಾಂಗಣದ ಸಮೀಪ 30 ಲಕ್ಷ ರೂ.ವೆಚ್ಚದಲ್ಲಿ ನಡೆಯುವ ತಡೆಗೋಡೆ ರಚನೆಯ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಈ ಹಿಂದೆ ಸ್ಥಳೀಯರು ತಡೆಗೋಡೆಯ ಕಾಮಗಾರಿಯ ಬೇಡಿಕೆ ಮುಂದಿಟ್ಟಿದ್ದರು. ಕೇಂದ್ರ ಸರಕಾರದ ಹದಿನಾಲ್ಕನೇ ಹಣಕಾಸು ಯೋಜನೆಯ ಅನುದಾನದಡಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ನಡೆಯುವ ಸಂದರ್ಭ ಸಾರ್ವಜನಿಕರಿಗೆ ಸಮಸ್ಯೆಯಾಗಬಹುದು.ಅಭಿವೃದ್ಧಿಯ ದೃಷ್ಟಿಯಲ್ಲಿ ಸಾರ್ವಜನಿಕರು ಆಡಳಿತ ವ್ಯವಸ್ಥೆಯೊಂದಿಗೆ ಸಹಕರಿಸಬೇಕು.
ಮಂಗಳೂರನ್ನು ಮಾದರಿ ಕ್ಷೇತ್ರವನ್ನಾಗಿಸುವ ಕನಸಿದೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸರಕಾರದಿಂದ ಅನುದಾನ ಒದಗಿಸಿ, ಅಭಿವೃದ್ಧಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುವಂತೆ ಅವಿರತವಾಗಿ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭ ಜಯಂತಿ ಆಚಾರ್, ಮೋಹನ್ ಆಚಾರ್, ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಹೆಗ್ಡೆ, ವಸಂತ ಜೆ. ಪೂಜಾರಿ, ವಾಮನ ಶೆಣೈ, ಗೋಕುಲದಾಸ್ ಭಟ್, ಗುರುಚರಣ್, ಹರೀಶ್ ಬೋಳೂರು, ರಾಮ್ಮೋಹನ್ ರಾವ್ ಉಪಸ್ಥಿತರಿದ್ದರು.