ಉಪಗ್ರಹದಿಂದ ಪ್ರಾಕೃತಿಕ ವಿಕೋಪ ಮುನ್ಸೂಚನೆ ಸಾಧ್ಯ: ವಿದ್ಯಾರ್ಥಿಗಳೊಂದಿಗೆ ಇಸ್ರೋ ವಿಜ್ಞಾನಿಗಳು

Update: 2019-10-04 17:14 GMT

ಪಡುಬಿದ್ರಿ: ಉಪಗ್ರಹದಿಂದ ಪ್ರಾಕೃತಿಕ ವಿಕೋಪ ಮುನ್ಸೂಚನೆ ಕೊಡಲು ಸಾಧ್ಯವಾಗಿದೆ. ಮಳೆ, ಬೆಳೆ, ನೀರು, ಚಂದ್ರನ ಮೇಲೆ ಏನೇನಿದೆ ಎಂದು ತಿಳಿಯಲು ಉಪಗ್ರಹಗಳಿಂದ ಸಾಧ್ಯವಾಗಿದೆ ಎಂದು ಇಸ್ರೋ ವಿಜ್ಞಾನಿ ಎಚ್.ಎನ್. ಸುರೇಶ್ ಕುಮಾರ್ ಹೇಳಿದರು. 

ಯುವ ಮನಸ್ಸಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಕುರಿತು ಅದಮಾರು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಉಪಗ್ರಹ ಜನಸಾಮಾನ್ಯರ ಜೀವನಕ್ಕೆ ಹತ್ತಿರವಾಗಿದೆ. 1990 ರ ದಶಕದಲ್ಲಿ ಆದ ಪ್ರಾಕೃತಿಕ ವಿಕೋಪದ ಬಗ್ಗೆ ಉಪಗ್ರಹ ತಂತ್ರಜ್ಞಾನದ ಮೂಲಕ ಮುನ್ಸೂಚನೆ ನೀಡಿದ ಪರಿಣಾಮ ಸುಮಾರು 15 ಸಾವಿರ ಜನರ ಜೀವ ಉಳಿಸಲು ಕಾರಣವಾಗಿದೆ ಎಂದರು. 

ಚಂದ್ರ-ನಕ್ಷತ್ರಗಳಿಗೆ ಹೆಬ್ಬಾಗಿಲು ಧ್ಯೇಯವಾಕ್ಯವನ್ನಿಟ್ಟುಕೊಂಡು ಚಂದ್ರನಲ್ಲಿಗೆ ಹೋಗಲು ಸಾಧ್ಯವಾದರೆ ಅಲ್ಲಿಂದ ಮುಂದಿನ ಗ್ರಹಗಳು, ನಕ್ಷತ್ರಗಳ ಅಧ್ಯಯನಕ್ಕೆ ಮೆಟ್ಟಿಲಾಗಬಹುದೆನ್ನುವ ನಿಟ್ಟಿನಲ್ಲಿ ಇಸ್ರೋ ಕಾರ್ಯಪ್ರವೃತವಾಗಿದೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಿದ್ದರೆ ಅದಕ್ಕೆ ಮೂಲ ಪುರಷರು ಉಡುಪಿ ರಾಮಚಂದ್ರ ರಾವ್. ಎಂದು ತಿಳಿಸಿದರು. 

ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ 14 ಮಂದಿ ಶೇಷ್ಠ ವಿಜ್ಞಾನಿಗಳು ಹಾಗೂ ವಿವಿಧ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳ 154 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ  ಪಾಲ್ಗೊಂಡಿದ್ದರು. ಪಿಎಸ್‍ಎಲ್‍ವಿ, ಜಿಎಸ್‍ಎಲ್‍ವಿ ಎಂ.ಕೆ.-3 ಉಪಗ್ರಹ ವಾಹಕ, ಮಂಗಳಯಾನ, ಚಂದ್ರಯಾನ-2, ರಿಸೋರ್ಸ್ ಸ್ಯಾಟ್ ಉಪಗ್ರಹಗಳ ಮಾದರಿ ಹಾಗೂ ಇಸ್ರೋ ಸಾಧನೆಗಳ ವಿವರಗಳ ಪ್ರದರ್ಶನ ಆಯೋಜಿಸಲಾಗಿತ್ತು.

ಇಸ್ರೋ ವಿಜ್ಞಾನಿ ಎಚ್.ಎನ್. ಸುರೇಶ್ ಕುಮಾರ್ ಮಂಗಳಯಾನದ ಮಾದರಿಯನ್ನು ಸ್ವಾಮೀಜಿ ಮೂಲಕ ಕಾಲೇಜಿಗೆ ಹಸ್ತಾಂತರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಜ್ಞಾನಿಗಳಾದ ಮುರಲೀಧರ ಕೆ.ವಿ. ಶ್ರೀಧರ ಎನ್. ಮಾಹಿತಿ ನೀಡಿದರು.

ರಾಜ್ಯದ ಅದಮಾರು, ಬೆಂಗಳೂರು, ಚಿತ್ರದುರ್ಗ, ಕುಮಟ, ಗದಗ ಶಹಾಪುರ, ತುಮಕೂರು ಇಸ್ರೋ ವಿಜ್ಞಾನಿಗಳೇ ತೆರಳಿ ಅಲ್ಲಿನ ಸುತ್ತಮುತ್ತಲಿನ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಸೇರಿಸಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾಡಿದ ಸಾಧನೆ ಹಾಗೂ ಅದರಿಂದ ಜನ ಸಾಮಾನ್ಯರಿಗಾದ ಅನುಕೂಲಗಳ ಉದ್ದೇಶದಿಂದ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿದ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ವಿಜ್ಞಾನದ ಸಾಧನೆ ಬಗ್ಗೆ ಮಕ್ಕಳಿಗೆ ಮೊದಲೇ ಗೊತ್ತಿಲ್ಲ, ತಂದೆ ತಾಯಿಯಂತೂ ಬಿಡುವುದೇ ಇಲ್ಲ, ಡಾಕ್ಟ್ರು, ಇಂಜಿನಿಯರೇ ಆಗಬೇಕೆಂದು ಇಚ್ಚಿಸುತ್ತಾರೆ. ಡಾಕ್ಟ್ರಾಗಿ ಚುಚ್ಚು ಮದ್ದು ಕೊಡಬೇಕು ಜನಸಂಖ್ಯೆ ಕಡಿಮೆಗೆ ಕಾರಣವಾದೀತು ವಿನಹ ಜನರ ಆರೋಗ್ಯವಾಗುತ್ತೇ ಎಂದು ನಾನು ಹೇಳುವುದಿಲ್ಲ ಎಂದರು.  

ಚಂದ್ರಯಾನ-2 ಉಡ್ಡಯನದ ಮೂಲಕ 130 ಕೋಟಿ ಜನರಿರುವ ಭಾರತವನ್ನು ವಿದೇಶಿಗರೂ ಭೇಷ್ ಎನ್ನುವಂತಾಗಲು ಇಸ್ರೋ ವಿಜ್ಞಾನಿಗಳ ಸಾಧನೆ ಕಾರಣವಾಗಿದೆ. ಮಕ್ಕಳು ಪ್ರಶ್ನಿಸುವ ಚಾತಿಯನ್ನು ಬಿಡದೇ ಮಾಡಬೇಕು. ವಿಷಯಗಳನ್ನು ಸಂಗ್ರಹಿಸಬೇಕು. ಉಪನಿಷತ್‍ನಲ್ಲಿ ಹೇಳಿದಂತೆ ಉಪಗ್ರಹ ಮೂಲಕ ಸಮಾಜಕ್ಕೆ ತಿಳಿಸಿಕೊಡುವ ಶ್ರೇಷ್ಠ ವಿಜ್ಞಾನಿಯಾಗುವ ಸಾಧನೆ ಮಾಡಿ ಎಂದು ಕಿವಿಮಾತು ಹೇಳಿದರು.

ಅದಮಾರು ಪೂರ್ಣ ಪ್ರಜ್ಞ ಪದವಿ ಪೂರ್ವ ಕಾಲೇಜು ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಪ್ರವೀಣ್‍ಕುಮಾರ್, ಉಡುಪಿ ಪೂರ್ಣ ಪ್ರಜ್ಞ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎ.ಪಿ.ಭಟ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಎಂ ಪೈ ಸ್ವಾಗತಿಸಿದರು, ಉಪನ್ಯಾಸಕಿ ನೀಶಾ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News