ವಾಹನ ಚಾಲಕರಿಂದ ದುಪ್ಪಟ್ಟು ದಂಡ ವಸೂಲಿ: ಕಾಂಗ್ರೆಸ್‍ನಿಂದ ಪ್ರತಿಭಟನೆಯ ಎಚ್ಚರಿಕೆ
ಪುತ್ತೂರು : ಕೇಂದ್ರ ಸರ್ಕಾರದ ಸಾರಿಗೆ ನೀತಿಯಿಂದಾಗಿ ವಾಹನ ಚಾಲಕ ಮಾಲಕರನ್ನು ಭಯೋತ್ಪಾದಕರಿಗಿಂತಲೂ ಕಡೆಯಾಗಿ ಕಾಣುವ ವ್ಯವಸ್ಥೆಯಾಗಿದೆ.ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಈ ರೀತಿಯ ವಾತಾವರಣ ನಿರ್ಮಾಣವಾಗಿರಲಿಲ್ಲ. ಪೊಲೀಸರು ವಾಹನ ಚಾಲಕರನ್ನು ಕಳ್ಳರ ರೀತಿಯಲ್ಲಿ ನೋಡುತ್ತಿದ್ದು,ಅಮಾನವೀಯ ವರ್ತನೆಯ ಮೂಲಕ ಅಧಿಕಾರಿಗಳಿಂದ ಕಾನೂನಿನ ದುರುಪಯೋಗವಾಗುತ್ತಿದೆ. ಇದೇ ರೀತಿ ಮುಂದುವರಿದರೆ ಪ್ರತಿಭಟಿಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರಿ ಸಾಧನೆಗಾಗಿ ಡಂಡ ವಸೂಲಿ ನೀತಿಯನ್ನು ಪೊಲೀಸರು ಅನುಸರಿಸುತ್ತಿದ್ದಾರೆ. ವಾಹನದ ಮೌಲ್ಯಕ್ಕಿಂತಲೂ ಅಧಿಕ ಮೊತ್ತದ ಡಂಡ ವಿಧಿಸುವ ಕೆಲಸ ನಡೆಯುತ್ತಿದ್ದು, ವಾಹನ ಚಾಲಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನ್ಯಾಯ ಸಮ್ಮತ ಕಾನೂನು ಅಲ್ಲ, ಜನಜಾಗೃತಿ ಮೂಡಿಸಿ ಕಾನೂನು ಜಾರಿಗೊಳಿಸುವ ಕೆಲಸ ಆಗಬೇಕಿತ್ತು ಎಂದ ಅವರು ಸರ್ಕಾರ ಕಾನೂನು ನಿಯಮಗಳನ್ನು ಸಡಿಲಗೊಳಿಸುವ ಜತೆಗೆ ಅಧಿಕಾರಿಗಳಿಗೆ ಕಿವಿಮಾತು ಹೇಳಬೇಕು ಎಂದು ಆಗ್ರಹಿಸಿದರು.
ರಾಜ್ಯವನ್ನು ಹಸಿವುಮುಕ್ತ ಮಾಡುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ಯೋಜನೆ, ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೊಳಿಸಿತ್ತು.ಈಗ ಪಡಿತರ ಅಕ್ಕಿ ಯೋಜನೆಯನ್ನೇ ಬದಲಾವಣೆ ಮಾಡಲಾಗಿದೆ. ಸಾಲಮನ್ನಾ, ಅಡಿಕೆ ಕೊಳೆರೋಗ ಪರಿಹಾರ ಬರುತ್ತಿಲ್ಲ, ಈ ಹಿಂದಿನ ಸರ್ಕಾರ ನೀಡಿದ್ದ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಸರ್ಕಾರ ಬೆದರಿಕೆಯೊಡ್ಡುವ ಕೆಲಸ ಮಾಡಿದೆ ಎಂದು ಆರೋಪಿಸಿದ ಅವರು, ಮೋದಿ ಅವರ ಅಚ್ಚೇ ದಿನ್ ಎಂದರೆ ಇದೇನಾ ಎಂದು ಪ್ರಶ್ನಿಸಿದ ಅವರು ಬಿಜೆಪಿ ಸರ್ಕಾರದ ಪೊಳ್ಳು ಬೆದರಿಕೆಗೆ ಬಿಪಿಎಲ್ ಪಡಿತರ ಚೀಟಿದಾರರು ಭಯ ಪಡಬೇಕಾಗಿಲ್ಲ. ನ್ಯಾಯಯುತವಲ್ಲದ ಕಾನೂನು ಜಾರಿಗೊಳಿಸಿದರೆ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ಸೂಲಿಬೆಲೆ ಸಮರ್ಥ ವಾದ
ರಾಜ್ಯದ ಬರಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಚಕ್ರವರ್ತಿ ಸೂಲಿಬೆಲೆ ಸಮರ್ಪಕವಾದ ವಾದವನ್ನು ಮಂಡಿಸಿರುವುದು ಸ್ವಾಗತಾರ್ಹವಾಗಿದೆ. ಈ ಹಿಂದೆ ಅವರು ಹೇಗೆ ಮಾತನಾಡಿದ್ದರು ಅನ್ನುವುದಕ್ಕಿಂತ ಈ ವಿಚಾರದಲ್ಲಿ ಅವರ ಚಿಂತನೆ ಉತ್ತಮವಾಗಿದೆ. ಅವರು ರಾಜ್ಯದ ಅಭಿಮಾನ ದಿಂದ ಸಮರ್ಥ ವಾದ ಮಂಡಿಸಿದ್ದಾರೆ. ಎಂಎಲ್‍ಎ, ಎಂಪಿ ಆಗುವ ಮೊದಲು ದೇಶಪ್ರೇಮಿಯಾಗಿದ್ದ ಚಕ್ರವರ್ತಿ ಸೂಲಿಬೆಲೆ ಈಗ ಮಾತನಾಡಿದ ಒಂದು ಸತ್ಯದ ಮಾತಿನಿಂದ ಬಿಜೆಪಿಗರ ಪಾಲಿಗೆ ದೇಶದ್ರೋಹಿಯಾಗಿದ್ದಾರೆ. ಅವರ ಪ್ರಸ್ತುತ ಸೂಲಿಬೆಲೆ ಅವರ ವಾದಕ್ಕೆ ನಮ್ಮ ಬೆಂಬಲವಿದೆ ಹೇಳಿದರು.
ಕಾಂಗ್ರೆಸ್ ಮುಖಂಡರಾದ ಲ್ಯಾನ್ಸಿ ಮಸ್ಕರೇನ್ಹಸ್, ಬೆಳ್ಳಿಪ್ಪಾಡಿ ಸುಭಾಸ್ ರೈ,ದಾಮೋದರ ಭಂಡಾರ್ಕರ್, ಮುಖೇಶ್ ಕೆಮ್ಮಿಂಜೆ, ರವಿಪ್ರಸಾದ್ ಶೆಟ್ಟಿ ಬನ್ನೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.