ಸಲಿಂಗ ಕ್ರಿಯೆ ನಡೆಸಿ ಹಣ ನೀಡದ್ದಕ್ಕಾಗಿ ಇಸ್ರೋ ವಿಜ್ಞಾನಿ ಹತ್ಯೆ: ಪೊಲೀಸ್

Update: 2019-10-04 18:25 GMT

ಹೈದರಾಬಾದ್,ಅ.4: ಸಲಿಂಗ ಕ್ರಿಯೆ ನಡೆಸಿ ಹಣ ಪಾವತಿ ಮಾಡದೆ ಇದ್ದ ಕಾರಣದಿಂದ ಇಸ್ರೋದ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಏಜೆನ್ಸಿ (ಎನ್‌ಆರ್‌ಎಸ್‌ಎ)ಯ ವಿಜ್ಞಾನಿ ಎಸ್ ಸುರೇಶ್ ಕುಮಾರ್ ಅವರ ಹತ್ಯೆ ನಡೆದಿದೆ ಎಂದು ಹೈದರಾಬಾದ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಹತ್ಯೆಗೆ ಸಂಭವಿಸಿದಂತೆ ಪೊಲೀಸರು ಲ್ಯಾಬ್ ತಂತ್ರಜ್ಞನೊಬ್ಬನನ್ನು ಬಂಧಿಸಿದ್ದು ಬಂಧಿತ ವ್ಯಕ್ತಿ ಮೃತ ವಿಜ್ಞಾನಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಆಮೀರ್‌ಪೇಟ್ ಪ್ರದೇಶದ ಫ್ಲಾಟ್‌ನಲ್ಲಿ ಮಂಗಳವಾರ ವಿಜ್ಞಾನಿಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರ ಪ್ರಕಾರ, ಲೈಂಗಿಕ ಕ್ರಿಯೆ ನಡೆಸಿದ ನಂತರ ವಿಜ್ಞಾನಿ ಹಣ ನೀಡದೆ ಇದ್ದಾಗ ಅವರಿಗೂ ಲ್ಯಾಬ್ ತಂತ್ರಜ್ಞ ಜೆ. ಶ್ರೀನಿವಾಸ್ ಎಂಬಾತನಿಗೂ ವಾಗ್ವಾದ ನಡೆದು ಆರೋಪಿಯು ವಿಜ್ಞಾನಿಯನ್ನು ಚೂರಿಯಿಂದ ಹತ್ಯೆ ಮಾಡಿದ್ದಾನೆ. ಆರೋಪಿ ಶ್ರೀನಿವಾಸ್, ವಿಜ್ಞಾನಿಯನ್ನು ಪ್ರತಿದಿನ ಭೇಟಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಅಂಜನಿ ಕುಮಾರ್ ತಿಳಿಸಿದ್ದಾರೆ.

ಘಟನೆಯ ಸ್ಥಳದಲ್ಲಿ ದೊರೆತ ಚಿನ್ನದ ಉಂಗುರ, ಹತ್ತು ಸಾವಿರ ರೂ. ನಗದು ಮತ್ತು ಫ್ಲಾಟನ್ನು ಹೊರಗಿನಿಂದ ಮುಚ್ಚಲಾಗಿದ್ದುದು ಈ ಹತ್ಯೆಯ ಆರೋಪಿಯ ಬಗ್ಗೆ ಸುಳಿವು ನೀಡಿತ್ತು ಎಂದು ಅವರು ತಿಳಿಸಿದ್ದಾರೆ. ವಿಜಯ ಡಯಾಗ್ನಾಸ್ಟಿಕ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ವಿಜ್ಞಾನಿ ಸುರೇಶ್ ಕುಮಾರ್ ಮನೆಗೆ ರಕ್ತದ ಮಾದರಿಗಳನ್ನು ಸಂಗ್ರಹಿಸಲು ಪ್ರತಿದಿನ ಆಗಮಿಸುತ್ತಿದ್ದ. ಸುರೇಶ್ ಕುಮಾರ್ ಶ್ರೀನಿವಾಸ್ ಬಳಿ ಲೈಂಗಿಕ ಕ್ರಿಯೆಯ ಬೇಡಿಕೆಯಿಟ್ಟಿದ್ದರು. ಹೆಚ್ಚಿನ ಹಣದ ಆಸೆಗಾಗಿ ಶ್ರೀನಿವಾಸ್ ಇದಕ್ಕೆ ಒಪ್ಪಿಗೆ ನೀಡಿದ್ದ. ಆದರೆ ವಿಜ್ಞಾನಿ ಹಣ ನೀಡದಿದ್ದಾಗ ಹತಾಶೆಗೊಂಡ ಆರೋಪಿ ವಿಜ್ಞಾನಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News