ಬೆಳ್ತಂಗಡಿ: ಗುಡುಗು ಸಿಡಿಲಿನೊಂದಿಗೆ ಭಾರೀ ಮಳೆ

Update: 2019-10-05 15:47 GMT

ಬೆಳ್ತಂಗಡಿ: ತಾಲೂಕಿನಾದ್ಯಂತ ಶನಿವಾರ ಅಪರಾಹ್ನ ಭಾರೀ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿದಿದ್ದು ಗುಡುಗಿನ ಅಬ್ಬರಕ್ಕೆ ಕಂಪನದ ಅನುಭವವಾಗಿದ್ದು ಜನರು ಭಯಪಡುವಂತಾಯಿತು.

ಶನಿವಾರ ಸಂಜೆ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ಮಳೆ ಆರಂಭವಾಗಿದೆ. ಮಳೆಯೊಂದಿಗೆ ಭಾರೀ ಗುಡುಗು ಮಿಂಚು  ಅಬ್ಬರಿಸಲಾರಂಭಿಸಿದವು. ಸಂಜೆ 6 ಗಂಟೆಯ ಸುಮಾರಿಗೆ ಭಾರೀ ಗುಡುಗೊಂದು ಗುರುವಾಯನಕೆರೆ ಪ್ರದೇಶದಲ್ಲಿ ಬಡಿದಿದ್ದು ಗುರುವಾಯನಕೆರೆ, ಗೇರುಕಟ್ಟೆ, ಬೆಳ್ತಂಗಡಿ ಸುತ್ತಮುತ್ತ ಗುಡುಗು, ಸಿಡಿಲಿನ ಸಂದರ್ಭ ಭೂಮಿ ಕಂಪನದ ಅನುಭವವಾಗಿದ್ದು, ಬಾಗಿಲುಗಳು ಕಿಟಕಿಗಳು ಕಂಪಿಸಿವೆ ಎಂದು ಜನರು ಮಾಹಿತಿ ನೀಡಿದ್ದು, ಇದರಿಂದ ಜನರು ಇದೊಂದು ಭೂಕಂಪನವೋ ಎಂದು ಆತಂಕ ಪಡುವಂತಾಯಿತು.

ಗುಡುಗು ಸಿಡಿಲು ಹಾಗೂ ಗಾಳಿಯ ಅಬ್ಬರಕ್ಕೆ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ತಾಲೂಕಿನ ಗ್ರಾಮೀಣ ಪ್ರದೇಶಗಳು ಕತ್ತಲಿನಲ್ಲಿವೆ.

ಆದರೆ ಯಾವುದೇ ರೀತಿಯ ಭೂಕಂಪನಗಳು ನಡೆದಿರುವ ಬಗ್ಗೆ  ಮಾಪನಗಳಲ್ಲಿ ದಾಖಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದು ಗುಡುಗಿನಿಂದಾಗಿ ಆಗಿರುವ ಅನುಭವವಾಗಿರಬಹುದು ಎಂದು ಅಂದಾಜಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News