×
Ad

ಮಂಗಳೂರು: ‘ಎಂಐಒ ಡೇ’ 8ನೇ ವಾರ್ಷಿಕೋತ್ಸವ

Update: 2019-10-05 21:31 IST

ಮಂಗಳೂರು, ಅ.5: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (ಎಂಐಒ), ಕ್ಯಾನ್ಸರ್ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯು ನಿರಂತರ ಸೇವೆ ಹಾಗೂ ಕ್ಯಾನ್ಸರ್ ರೋಗಿಗಳ ಆರೈಕೆಯ ನೆನಪಿಗಾಗಿ 8ನೇ ವಾರ್ಷಿಕೋತ್ಸವದ 'ಎಂಐಒ ಡೇ' ಕಾರ್ಯಕ್ರಮವನ್ನು ನಗರದ ಪಂಪ್‌ವೆಲ್‌ನ ಎಂಐಒ ಆವರಣದಲ್ಲಿ ಶನಿವಾರ ಸಂಜೆ ಹಿರಿಯ ಆಂಕಾಲಜಿ ತಜ್ಞ ಡಾ.ಎಂ.ಎಸ್. ವಿದ್ಯಾ ಸಾಗರ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಗಲ್ಫ್ ಹಾಗೂ ಆಫ್ರಿಕನ್ ರಾಷ್ಟ್ರಗಳಲ್ಲಿನ ಆಸ್ಪತ್ರೆಗಳ ಸೌಲಭ್ಯ, ಚಿಕಿತ್ಸೆ, ವೆಚ್ಚಗಳನ್ನು ನೋಡಿದಾಗ ಮಂಗಳೂರಿನಲ್ಲಿ ದೊರೆಯುವ ಚಿಕಿತ್ಸೆ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಆರ್ಥಿಕ ವೆಚ್ಚವೂ ಅಧಿಕವಲ್ಲ. ಮಂಗಳೂರಿನಲ್ಲಿ ‘ಮೆಡಿಕಲ್ ಟೂರಿಸಂ’ ಆರಂಭಿಸುವ ಸಿದ್ಧತೆ ನಡೆದಿದೆ ಎಂದು ಹೇಳಿದರು.

ಮಂಗಳೂರು ನಗರವು ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ವೈದ್ಯಕೀಯ ರಂಗದಲ್ಲೂ ಮುಂಚೂಣಿಯಲ್ಲಿದೆ. ದೇಶ-ವಿದೇಶದಿಂದಲೂ ರೋಗಿಗಳು ಮಂಗಳೂರಿಗೆ ಬಂದು ಚಿಕಿತ್ಸೆ ಪಡೆದು ತೆರಳುತ್ತಿದ್ದಾರೆ. ಕರಾವಳಿ ಪ್ರದೇಶವು ಮೆಡಿಕಲ್ ಟೂರಿಸಂಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ವಿದೇಶದಿಂದ ಬರುವ ರೋಗಿಯನ್ನು ವಿಮಾನ ನಿಲ್ದಾಣದಿಂದ ವಿಶೇಷ ವಾಹನದಲ್ಲಿ ಕರೆತಂದು, ಚಿಕಿತ್ಸೆ ನೀಡಿ, ವಾಪಸ್ ವಿಮಾನ ನಿಲ್ದಾಣವರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮೆಡಿಕಲ್ ಟೂರಿಸಂನಲ್ಲಿದೆ. ಇದರಿಂದ ಜಿಲ್ಲೆಗೆ ವಾರ್ಷಿಕ 2000ದಿಂದ 3000 ಕೋಟಿ ರೂ. ವರೆಗೆ ಲಾಭ ಆಗಲಿದೆ ಎಂದು ಮಾಹಿತಿ ನೀಡಿದರು.

ಯೆನೆಪೊಯ ವಿಶ್ವವಿದ್ಯಾನಿಲಯದ ಉಪಕುಲಪತಿ ಹಾಗೂ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ವಿಜಯ ಕುಮಾರ್ ಮಾತನಾಡಿ, ದೇಶದಲ್ಲಿ ಶೇ.12ರಷ್ಟು ಜನರು ಕ್ಯಾನ್ಸರ್ ಪ್ರಾಥಮಿಕ ಹಂತದಲ್ಲಿರುವಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಇನ್ನು ಶೇ.88ರಷ್ಟು ಜನರು ತಡವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೆರಿಕ, ಇಂಗ್ಲೆಂಡ್‌ಗೆ ಹೋಲಿಸಿದಾಗ ಭಾರತದಲ್ಲಿಯೇ ಕ್ಯಾನ್ಸರ್ ರೋಗಿಗಳ ಪ್ರಮಾಣ ಕಡಿಮೆ ಇದೆ. ಎಂಐಒ ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಸಾಧನೆಯ ಶಿಖರವನ್ನೇರಿದೆ ಎಂದರು.

ಕಾರ್ಯಕ್ರಮದಲ್ಲಿ ಎಂಐಒ ಕೈಪಿಡಿ ಮತ್ತು ಹೊಸ ಲಾಂಛನವನ್ನು ಎಂಐಒ ಅಧ್ಯಕ್ಷ ಅನಂತಕೃಷ್ಣ ಅನಾವರಣಗೊಳಿಸಿದರು. ಎಂಐಒ ನಿರ್ದೇಶಕ ರಾದ ಡಾ.ಜಲಾಲುದ್ದೀನ್ ಅಕ್ಬರ್ ಕೆ.ಸಿ., ಡಾ.ಕೃಷ್ಣ ಪ್ರಸಾದ್ ಎಂಐಒ ಆರೋಗ್ಯ ಯೋಜನೆಯ ಮಾಹಿತಿ ನೀಡಿದರು.

25 ಸಾವಿರ ರೋಗಿಗಳಿಗೆ ವಿಕಿರಣ ಚಿಕಿತ್ಸೆ ಪೂರ್ತಿಗೊಳಿಸಿದ ಅಪರೂಪದ ಶ್ರೇಷ್ಠ ಸಾಧನೆಗಾಗಿ ಎಂಐಒ ಸಂಸ್ಥೆಯ ನಿರ್ದೇಶಕ ಡಾ.ಸುರೇಶ್ ರಾವ್ ಅವರನ್ನು ಹಿರಿಯ ಆಂಕಾಲಜಿ ತಜ್ಞ ಡಾ.ಎಂ.ಎಸ್.ವಿದ್ಯಾಸಾಗರ್ ಹಾಗೂ ಶಾಸಕ ವೇದವ್ಯಾಸ ಕಾಮತ್ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಹಿರಿಯ ಆಂಕಾಲಜಿ ತಜ್ಞ ಡಾ.ಎಂ.ಎಸ್. ವಿದ್ಯಾಸಾಗರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಎಚ್.ಆರ್. ಮ್ಯಾನೇಜರ್ ಸುಜಾತಾ ರಾವ್ ಮತ್ತಿತರರು ಉಪಸ್ಥಿತರಿದ್ದರು. ಎಂಐಒ ಸಂಸ್ಥೆಯ ನಿರ್ದೇಶಕ ಡಾ.ಸನತ್ ಹೆಗ್ಡೆ ಸ್ವಾಗತಿಸಿದರು. ಡಾ.ಎಂ.ಎಸ್. ಬಾಳಿಗಾ ವಂದಿಸಿದರು. ರಿಹಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News