×
Ad

ಭಾರತದ ಇಂದಿನ ಮಾಧ್ಯಮಗಳು ಸಂವೇದನಾ ರಹಿತ: ರಾಜ್ ಚೆಂಗಪ್ಪ

Update: 2019-10-05 21:37 IST

ಮಣಿಪಾಲ, ಅ.5: ‘ನವಭಾರತದ’ ಮಾಧ್ಯಮಗಳು ಸಂವೇದನಾರಹಿತ ವಾಗಿದ್ದು, ಭಾವನೆಗಳು ಹಾಗೂ ಮಾನವೀಯತೆಗಾಗಿ ಇವುಗಳು ಹಿಂದಿನ ದಿನಗಳ ಮಾಧ್ಯಮಗಳನ್ನು ಅವಲೋಕಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಹಾಗೂ ‘ಇಂಡಿಯಾ ಟುಡೆ’ ಸಮೂಹದ ಸಂಪಾದಕೀಯ ನಿರ್ದೇಶಕರಾಗಿರುವ ರಾಜ್ ಚೆಂಗಪ್ಪ ಹೇಳಿದ್ದಾರೆ.

ಮಾಹೆಯ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ಮಣಿಪಾಲದ ಫಾರ್ಚ್ಯೂನ್ ಇನ್ ವ್ಯಾಲಿವ್ಯೆ ಹೊಟೇಲ್‌ನ ಚೈತ್ಯಾ ಹಾಲ್‌ನಲ್ಲಿ ಆಯೋಜಿಸಿದ್ದ ಐದನೇ ಎಂ.ವಿ.ಕಾಮತ್ ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ‘ಮಾಧ್ಯಮಳು ಮತ್ತು ನವಭಾರತ’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.

‘ನವ ಭಾರತವೆಂಬುದು ಕೇವಲ ನರೇಂದ್ರ ಮೋದಿ ಅವರ ಮಿಶ್ರಣವಲ್ಲ. ಇಲ್ಲಿನ ಜನರು ಈಗಲೂ ಅಭಿವ್ಯಕ್ತಶೀಲರಾಗಿದ್ದಾರೆ.’ ಎಂದ ಕೊಡಗು ಮೂಲದ ರಾಜ್ ಚೆಂಗಪ್ಪ, ದೇಶದ ನಾಗರಿಕರು ಹಾಗೂ ಸಮಾಜದೊಂದಿಗೆ ಸಂಬಂಧವನ್ನು, ಸಂಪರ್ಕವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದರು. ಸಮಾಜದೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸುವಂತೆ ಅವರು ಕಿವಿಮಾತು ಹೇಳಿದರು.

ಇಂದು ಸತ್ಯವನ್ನು ಕಂಡುಹಿಡಿಯುವುದು ಹಿಂದಿನಷ್ಟು ಸುಲಭವಿಲ್ಲ. ಸಾಧ್ಯವಿದ್ದಷ್ಟು ಹೆಚ್ಚು ಹೆಚ್ಚು ಜನರೊಂದಿಗೆ ಮಾತನಾಡಿ ಸತ್ಯದ ಸಮೀಪಕ್ಕೆ ಬರಲು ಯುವ ಪತ್ರಕರ್ತರು ಪ್ರಯತ್ನಿಸಬೇಕು ಎಂದು ಹೇಳಿದ ರಾಜ್, ಸತ್ಯದ ಅನ್ವೇಷಣೆ ಎಂಬುದು ಪತ್ರಿಕೋದ್ಯಮದ ಅನ್ವೇಷಣೆಯೂ ಆಗಿದೆ ಎಂದರು.

ಸತ್ಯ ಮತ್ತು ಪತ್ರಿಕೋದ್ಯಮಕ್ಕೆ ತೀರಾ ನಿಕಟ ಸಂಬಂಧವಿದೆ. ಇದರಲ್ಲಿ ಸತ್ಯದ ಅನ್ವೇಷಣೆ ಎಂಬುದು ನಿರ್ಣಾಯಕವಾಗಿದೆ. ಹೌದು, ಸತ್ಯ ಎಂಬುದು ಬಹಳಷ್ಟು ಜನಕ್ಕೆ ಅಸಹನೀಯವಾಗಿದೆ. ಆದರೆ ತಮ್ಮ ವೃತ್ತಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಒಬ್ಬ ಪತ್ರಕರ್ತನಿಗೆ ಸತ್ಯ ಎಂಬುದು ಪ್ರಧಾನ ಅಸ್ತ್ರವಾಗಿದೆ ಎಂದರು.

ಜೀವನದಲ್ಲಿ ಕುತೂಹಲವನ್ನು ಎಂದೆಂದೂ ಉಳಿಸಿಕೊಳ್ಳುವ ಅಗತ್ಯವಿದೆ. ಪತ್ರಕರ್ತನಾದವನು ಕುತೂಹಲದ ಗುಣವನ್ನು ಎಂದೆಂದೂ ಕಳೆದುಕೊಳ್ಳಲೇ ಬಾರದು. ಬದುಕಲ್ಲಿ ಕುತೂಹಲವನ್ನು ಕಳೆದುಕೊಂಡವನು ಪತ್ರಕರ್ತನಾಗಿ ಏನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ಇದರೊಂದಿಗೆ ಪರಿಸರವನ್ನು ರಕ್ಷಿಸಿ, ಕಾಪಾಡುವಲ್ಲೂ ಹೆಚ್ಚಿನ ಮುತುವರ್ಜಿ ಯನ್ನು ತೋರಿಸಬೇಕಾಗಿದೆ. ಪರಿಸರಕ್ಕೆ ಸಣ್ಣ ಪ್ರಮಾಣದಲ್ಲಾದರೂ ಆಗುವ ಹಾನಿ, ಇಡೀ ಪರಿಸರ ವ್ಯವಸ್ಥೆಯ ಮೇಲೆ ಅಗಾಧ ಪರಿಣಾಮ ಬೀರಿ, ಸರಿಪಡಿಸಲಾಗದ ದುರಂತವಾಗಿ ಹೊರಹೊಮ್ಮಬಹುದು. ಇವು ಒಂದಕ್ಕೊಂದು ಅಂತರ್ಗತವಾಗಿವೆ ಎಂದು ಪರಿಸರಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ಲೇಖನಗಳನ್ನು ಬರೆದಿರುವ ರಾಜ್ ಚೆಂಗಪ್ಪ ನುಡಿದರು.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು. ಎಂಐಸಿಯ ನಿರ್ದೇಶಕಿ ಡಾ.ಪದ್ಮರಾಣಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News